ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ನಿವೇದನೆ

ಭಗವಾನರ ಬಾಯಿಕಟ್ಟಿತು. ಅವರು ಶಿಷ್ಯನ ತಲೆಯಮೇಲೆ ಕೈಯಿಟ್ಟು ‘ ಬಾಬು, ನೀನೊಂದು ಸ್ವಯಂ ಪ್ರಕಾಶವಾದ ರತ್ನ ! ಗುರುದೆವನು ನಿನ್ನನ್ನು ಕಾಪಾಡಲಿ, ಹೋಗಿ ಬಾ ! ಮರೆಯದಿರು- ನಮ್ಮ ದೇಶ ನಮ್ಮ ಮನೆ. ಅದು ನಿರ್ಮಲವಾಗಿರಬೇಕು. ನಮ್ಮ ನಾಗರಿಕತೆ ಸಂಸ್ಕೃತಿಗಳು ಕಳಚಿ ಕೆಳಕ್ಕೆ ಬೀಳುತ್ತಾ ಇವೆ. ಅವುಗಳ ಪುನರುದ್ಧಾರವಾಗಬೇಕು. ನಿನ್ನ ಬಾಳು ಜನತಾ ಜನಾರ್ಧನನ ಸೇವೆಗೆ ಮೀಸಲಾದುದು. ನಿನ್ನಿಂದ ಮಹತ್ಕಾರ್ಯ ಸಾಧನೆಯಾಗುವುದೆಂದು ನನ್ನ ಅಂತರ್ವಾಣಿ ಹೇಳುತ್ತಿದೆ. ಅದು ಜಗತ್ತಿಗೊಂದು ಮಾದರಿಯಾಗಲಿ’ ಎಂದು ಹರಸಿದರು. ಚಡ್ಡಿ ಬಾಬು ಅವರಿಗೆ ನಮಸ್ಕರಿಸಿ, ಅಂದೇ ರಾತ್ರಿ ಮಲ್ಲಾಡಿ ಹಳ್ಳಿಗೆ ಪ್ರಯಾಣ ಬೆಳೆಸಿದರು.

ಎಲ್ಲಿ ಕ್ಷಣಕಾಲ ನಿಂತು ಈ ರಾಘವೇಂದ್ರ ಸ್ವಾಮೀಜಿ ಯಾರು? ಎಲ್ಲಿಂದ ಇಲ್ಲಿಗೆ ಬಂದರು? ಇವರ ಪೂರ್ವೊತ್ತರವೇನು? ಎಂಬುದನ್ನೂ ಸ್ವಲ್ಪ ಆಲೋಚಿಸೋಣ. ಬಹುಕಾಲ ಈ ಪ್ರಶ್ನಾರ್ಥಕ ಚಿಹ್ನೆಗಳು ಪ್ರತ್ಯುತ್ತರವಿಲ್ಲದೆ ವಿಕಟಾಟ್ಟಹಾಸ  ಮಾಡುತ್ತಾ ನಮ್ಮ ಕಣ್ಣೆದುರಿಗೆ ನಿಲ್ಲುತ್ತಿದ್ದವು. ಅವರು ಆಶ್ರಮವನ್ನು ಸ್ಥಾಪಿಸಿದ ಕಾಳುಶತಮಾನದ ವರೆಗೂ ಅವರ ಇತಿಹಾಸ ನಿಗೂಢವಾಗಿತ್ತು. ಎಡಕ್ಕೆ ನಿರ್ಧಿಸ್ಟವಾದ ಉತ್ತರ ಒಬ್ಬರಿಗೆ ಮಾತ್ರ ಗೊತ್ತಿರಲು ಸಾಧ್ಯ. ಅವರು ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ. ಅವರು ಈ ವಿಚಾರದಲ್ಲಿ ಮೌನಿ. ಋಷೀ ಮೂಲ, ನದೀ ಮೂಲಗಳನ್ನೂ ಕೆದಕಿ ನೋಡಬಾರದೆಂದೋ, ಅಥವಾ ಶ್ರೀ ರಾಮ ಕೃಷ್ಣ ಪರಮಹಂಸರು ಹೇಳುವ ದೃಷ್ಟಾಂತದ ಕಥೆಯಂತೆ ಕೈಗೆ ಸಿಕ್ಕಿರುವ ಸ್ವಾದು ಫಲವನ್ನು ಸವಿಯುವುದಕ್ಕೆ ಬದಲಾಗಿ ‘ಇದು ಯಾವ ಮರದ ಫಲ ? ಅದನ್ನು ನಾಟಿದವರಾರು? ಅದಕ್ಕೀಗ ವಯಸ್ಸೆಷ್ಟು? ಇದು ಯಾವ ಜಾತಿಯದು?-ಇತ್ಯಾದಿ ವ್ಯರ್ಥಪ್ರಶ್ನೆಗಳನ್ನು ಕೇಳುವುದು ವ್ಯರ್ಥವೆಂದೂ ಭಾವಿಸಿ ಜನ ತೆಪ್ಪಗಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಶ್ರೀ ಶ್ರೀ ಯವರು ಬರೆದಿರುವ ‘ಸೂರ್ಯನಮಸ್ಕಾರ-ತತ್ವ ಮತ್ತು ಆಚರಣೆ’, ‘ಯೋಗಾಸನಗಳು’, ‘ಶಟ್ಕರ್ಮವಿಧಿ’, ‘ಗುರು ನಮಸ್ಕಾರ’-ಇತ್ಯಾದಿ  ಶಾಸ್ತ್ರ ಗ್ರಂಥಗಳಲ್ಲಿ ಮುನ್ನುಡಿ ಗಳನ್ನೂ ಬರೆಯುವಾಗ ಆನುಷಂಗಿಕವಾಗಿ ತಮ್ಮ ಬಾಲ್ಯ ಸ್ಥಿತಿಯನ್ನೂ ಗುರುಚರಿತೆಯನ್ನೂ ಸ್ಥೂಲವಾಗಿ ಕೊಟ್ಟಿದ್ದಾರೆ. ತಿಳಿಯಲಾಗದ ವಿಷಯಗಳಲ್ಲಿ ಯಾವಾಗಲೂ ಕುತೂಹಲ ಹೆಚ್ಚಲ್ಲವೇ ? ‘ತಿನ್ನಲಾಗದ ಹಣ್ಣು ಬಲು ರುಚಿ’ ಆದ್ದರಿಂದ ಶ್ರೀಯವರ ಜೀವನ ಚರಿತ್ರೆಯನ್ನು ಅಮೂಲಾಗ್ರವಾಗಿ ಅರಿಯಬೇಕೆಂಬ ನಮ್ಮ ಪ್ರಯತ್ನವೂ ಸ್ವಲ್ಪ ಮಟ್ಟಿಗೆ ಸಫಲವಾಗಿ, ಅವರ ಜೀವನ ಚರಿತ್ರೆಯ ಸ್ಥೂಲರೇಖೆಗಳನ್ನು ಮೂಡಿಸಲು ಇಲ್ಲಿ ಸಾಧ್ಯವಾಗಿದೆ.

ಪ್ರತಿಯೊಬ್ಬನ ಜೀವನವೂ ಒಂದು-ಕಾದಂಬರಿ ಎಂದು ಹೇಳುವುದುಂಟು. ಆದರೆ ಶ್ರೀ ರಾಘವೇಂದ್ರ  ಸ್ವಾಮಿಯವರ ಜೀವನ ಚರಿತ್ರೆ ಕಾದಂಬರಿಯಲ್ಲ. ಅದೊಂದು ಮಹಾಕಾವ್ಯ. ಅವರು ಜನಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಾರಕೂರಿನಲ್ಲಿ. *ತಂದೆ ನರಸಿಂಹಯ್ಯ ತಾಳಮದ್ದಳೆ ಅಥವಾ ಯಕ್ಷಗಾನದಲ್ಲಿ ಪಾತ್ರಧಾರಿಗಳಾಗಿದ್ದುದಲ್ಲದೆ, ಸುಪ್ರಸಿದ್ದ ಅರ್ಥಧಾರಿಗಳಾಗಿದ್ದರು. ಅವರ ಸಮಯ ಸ್ಫೂರ್ತಿ, ನಾಕ್ಚಾತುರ್ಯಗಳು ಅಸದ್ರುಶವಾದುವು. ಶ್ರೀಯವರ ತಾಯಿ ಪುತ್ತಲೀ ಬಾಯಿ. ಔದಾರ್ಯಕ್ಕೆ, ಸೌಜನ್ಯಕ್ಕೆ ಮತ್ತೊಂದು ಹೆಸರು, ಆಕೆ. ಅವರ ಪುಣ್ಯ ಗರ್ಭಸುಧಾಂಬುಧಿಯಲ್ಲಿ ಮೂಡಿದ ಮೂರು ಪುತ್ರ ರತ್ನಗಳಲ್ಲಿ ರಾಘವೇಂದ್ರರು ಮಧ್ಯದ ನಾಯಕರತ್ನ. ಮಗು ಮಾತವಾಗಿ ನೋಡಲು ತುಂಬಾ ಮುದ್ದಾಗಿತ್ತು. ಆದರೆ ರೋಗದ ಕೋಳಿ ಅದು ಬೆಳೆಯುತ್ತಾ ಹೋದಂತೆ ಅದರ ರೋಗವೂ ಬೆಳೆಯುತ್ತಾ ಹೋಯಿತು. ತಾಯಿ ತಂದೆಗಳು ಈ ಮಗುವನ್ನು ಉಳಿಸಿಕೊಳ್ಳಬೇಕೆಂದು ಮಲೆಯಾಳಿ ಪಂಡಿತರನ್ನು ಆಶ್ರಯಿಸಿದರು. ಏನು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅತ್ತ ಸತ್ತಂತಲ್ಲ, ಇತ್ತ ಬದುಕಿ ಬಾಳಿದಂತೆಯೂ ಅಲ್ಲ, ಸಜೀವವಾದ ಹೆಣ. ದೇಹ ರೋಗಗ್ರಸ್ತವಾಗಿದ್ದರೂ ಬುದ್ಧಿ ಮಾತ್ರ ಪಾದರಸದಂತಿತ್ತು. ಹುಡುಗ ಹೆಚ್ಚು ಕಷ್ಠ ಪಡದೆ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ ಕುಂದಾಪುರದ ಪ್ರೌಢಶಾಲೆಯನ್ನು ಪ್ರವೇಶಿಸಿದನು. ಅಲ್ಲಿಯೂ ಆತನ ದೇಹಸ್ಥಿತಿ ಸುಧಾರಿಸಲಿಲ್ಲ; ಹಿಂದಿನ ರೋಗಗಳ ಸರಮಾಲೆಯಲ್ಲಿ ನಾಯಕರತ್ನದಂತೆ ಅಪಸ್ಮಾರಿ ರೋಗ ಗಂಟುಬಿತ್ತು. ಅವನು ಯಾರ ತಂಟೆಗೂ ಹೋಗುತ್ತಿರಲಿಲ್ಲ; ಯಾರೂ ಅವನ ತಂಟೆಗೂ ಹೋಗುತ್ತಿರಲಿಲ್ಲ. ಅವನಿಗೆ ಜೀವನವೊಂದು ಹೊರೆಯೆನಿಸಿತು. ಅವನು ಹುಟ್ಟಿದುದು ಯುಗಾದಿಯ ಹಿಂದಿನ ದಿನವಂತೆ! ಮರುದಿನದ ಬೇವು ಬೆಲ್ಲಗಳಲ್ಲಿ ಮೊದಲದನ್ನೇ ಆಯ್ದುಕೊಂಡು ಹುಟ್ಟಿದ್ದನೋ ಏನೋ! ಮುಂದಿನದು ಉಳಿದವರಿಗಿರಲೆಂದು ಭಾವಿಸಿರಬೇಕು. ಮೂಳೇಯ ಹಂದರದಂತಿದ್ದ ಈ ಪ್ರಾಣಿ ಒಂಟಿ ಬದುಕನಾಗಿದ್ದರೂ ಶಾಲೆಯ ಶಿಕ್ಷಕರಿಗೆ ಮಾತ್ರ ಅಚ್ಚುಮೆಚ್ಚು. ಅದಕ್ಕೆ ಕಾರಣ ಅವನ ಸೂಕ್ಷ್ಮ ಬುದ್ಧಿ. ಅದಕ್ಕೂ ಹೆಚ್ಚಾಗಿ ಅವನ ಅಂಗಸೌಷ್ಠವ, ಮುಖ ಸೌಂದರ್ಯ, ಕಂಠಶ್ರೀ. ತಂದೆಯ ಯಕ್ಷಗಾನ ಕಲೆ-ನರ್ತನ, ಅಭಿನಯ, ಭಾವಮುದ್ರಿಕೆ-ಮಗನಲ್ಲಿ ರಕ್ತಗತವಾಗಿ ಇಳಿದು ಬಂದಿತ್ತೆಂದು ತೋರುತ್ತದೆ. ಇದರಿಂದ ಶಾಲೆಯ ರಂಗಸ್ಥಳದಲ್ಲಿ ಆತನಿಗೆ ಮುಖ್ಯವಾದ ಸ್ಥಾನ ಮೀಸಲು. ವೇಷಧಾರಿಯಾದಾಗ ಉತ್ಸಾಹದ ಬುಗ್ಗೆಯಾಗಿರುತ್ತಿದ್ದ ಈ ವಿಲಕ್ಷಣ ಹುಡುಗ ಬಣ್ಣ ಅಳಿಸುತ್ತಲೇ ಬಣ್ಣಗೆಟ್ಟು ಹೋಗುತ್ತಿದ್ದ.

ಹೊರಲಾರದ ಹೊರೆ ಹೊತ್ತು ಸಾಗುವ ಪಯಣಿಗನಂತೆ ಈ ನಿತ್ಯ ರೋಗಿ ರಾಘವೇಂದ್ರ ಬಾಳ ಪಯಣವನ್ನು ಬಲವಂತವಾಗಿ ಮುಂದುವರಿಸುತ್ತಿದ್ದಾಗ ಒಂದು ದಿನ ಅಕಸ್ಮಾತ್ತಾಗಿ ಪರಮಪೂಜ್ಯ ನಿತ್ಯಾನಂದಜೀ ಯವರ ದರ್ಶನದ ಲಾಭ ದೊರೆಯಿತು. ಅವರು ಬಾಲಕನ ತಲೆ ಸವರಿ ಧ್ಯಾನಯೋಗದ ಮಾರ್ಗವನ್ನು ಉಪದೇಶಿಸಿದರು. ಇದರಿಂದ ಬಾಲಕನಲ್ಲಿ ನೆಲೆಸಿದ್ದ ನಿರಾಶಾಭಾವನೆ ತೊಲಗಿತು. ಅವರೊಡನೆ ಓದಿನ ಮೇಲಿದ್ದ ಅಲ್ಪಸ್ವಲ್ಪ ಆಸಕ್ತಿಯೂ ಸತ್ತು ಹೋಯಿತು. ಬರಬರುತ್ತಾ ಅವನು ಏಕಾಂತಪ್ರಿಯನಾಗಿ ಹೋದ. ಕಾಲ ಉರುಳಿತು. ಹುಡುಗ ಹೈಸ್ಕೂಲಿನ ಕಡೆಯ ತರಗತಿಯಲ್ಲಿ ಹನ್ನೆರಡು ರೂಪಾಯಿ ಪರೀಕ್ಷೆಗೆ ಕಟ್ಟುವ ಕಾಲ ಸನ್ನಿಹಿತವಾಯಿತು. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಲೇ ಮಗನನ್ನು ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸಬೇಕೆಂದು ತಂದೆಯ ಸನ್ನಾಹ. ಇತ್ತ ಮಗ ಕುಂದಾಪುರದಿಂದ ತಂದೆಗೊಂದು ಪತ್ರ ಬರೆದ-‘ನನಗೆ ಲೌಕಿಕ ಜೀವನದಲ್ಲಿ ಜಿಜ್ಞಾಸೆ ಹುಟ್ಟಿದೆ; ನಾನು ಸತ್ಯವನ್ನು ಹುಡುಕಿಕೊಂಡು ಹೊರಟಿದ್ದೇನೆ; ದಯವಿಟ್ಟು ನನ್ನನ್ನು ಹುಡುಕಬೇಡಿ; ನನ್ನ ಹಾದಿಗೆ ಅಡ್ಡಿಯಾಗಬೇಡಿ.’

ರಾಘವೇಂದ್ರ ಗೃಹತ್ಯಾಗಿಯಾದುದು ಯುಗಾದಿಯ ದಿನ. ಕೈಲಿ ಕಾಸಿಲ್ಲದೆ ಉಟ್ಟ ಬಟ್ಟೆಯಲ್ಲಿ ಹೊರಟ ಈ ಹುಡುಗ ಹೆದ್ದಾರಿಯನ್ನು ಹಿಡಿದು ನಡೆದ, ನಡೆದ, ನಡೆದ, ಸಂಜೆಯವರೆಗೂ ನಡೆದ. ಹಾದಿಯಲ್ಲಿ ಸಿಕ್ಕಿದ ಹಳ್ಳಿಯೊಂದರಲ್ಲಿ ಯಾರೋ ಕರುಣೆಯಿಂದ ನೀಡಿದ ಆಹಾರವನ್ನು ತಿಂದು, ಗುಡಿಯ ಮುಂದಿನ ಬಂಡೆಯಮೇಲೆ ಇರುಳನ್ನು ನೂಕಿ, ಬೆಳಕು ಹರಿಯುತ್ತಲೇ ಪ್ರಯಾಣ ಮುಂದುವರಿಸಿದ. ನಿತ್ಯ ರೋಗಿಯಾದ ಈ ಹೆಣದತ್ತ ಅದು ಹೇಗೆ ಕಾಲ್ನಡಿಗೆಯಿಂದ ಮಾರ್ಗಕ್ರಮಣ ಮಾಡುತ್ತಾ ಹೋದನೆಂಬುದೇ ಒಂದು ಅಚ್ಚರಿ. ಒಂದು ದಿನವಲ್ಲ, ಎರಡಲ್ಲ; ತಿಂಗಳುಗಟ್ಟಲೇ ನಡೆನಡೆದು ಹುಬ್ಬಳ್ಳಿಯನ್ನು ಸೇರಿದ. ಅಲ್ಲಿನ ಸಿದ್ಧಾರೂಢ ಸ್ವಾಮಿಗಳು ದೇವಾಂಶ ಸಂಭೂತರೆಂದು ಪ್ರಸಿದ್ಧರಾಗಿದ್ದ ಪರಮಜ್ಞಾನಿಗಳು. ಹುಡುಗ ಅವರನ್ನು ಕಂಡು ಅಡ್ಡಬಿದ್ದ. ಅವರು ಹೇಳಿದರು-‘ಏನಲೇ, ಏನು ಬೇಕು?’ ಎಂದರು. ಬಂದೂಕದ ಬಾಯಿಯಿಂದ ಗುಂಡು ಹಾರುವಂತೆ ಹುಡುಗನ ಬಾಯಿಯಿಂದ ಮಾತು ಹೊರಟಿತು-‘ದೇವರು’. ಸಿದ್ಧಾರೂಢರು ಮೌನವಾಗಿದ್ದರು. ಹುಡುಗ ಅಲ್ಲಿಂದ ಕದಲಲಿಲ್ಲ. ನಾಲ್ಕು ದಿನಗಳಾದಮೇಲೆ ಅವರು ಹೇಳಿದರು-‘ಎಲೆ ಹುಡುಗ, ನಿನ್ನ ಗುರು ಬೇರೆ ಐದಾನೆ ಕಣಲೇ. ಅವನನ್ನು ಹುಡುಕಿಕೊಂಡು ಹೋಗು’ ಎಂದರು. ತಕ್ಷಣವೇ ಹುಡುಗ ಅಲ್ಲಿಂದ ಹೊರಟ. ಸನ್ಯಾಸಿಗಳನ್ನು ಸಾಧುಸಂತರನ್ನು ಕಂಡಕೂಡಲೇ ಅವರಿಗೆ ಅಡ್ಡ ಬಿದ್ದು ‘ನೀವು ದೇವರನ್ನು ನೋಡಿದ್ದೀರಾ? ನನಗೆ ತೋರಿಸುತ್ತೀರಾ?’ ಎಂದು ಪ್ರಶ್ನಿಸುವನು. ಇದನ್ನು ಕೇಳಿ ಕೆಲವರು ನಗುವರು, ಕೆಲವರು ಗಂಭೀರ ಭಾವವನ್ನು ತಳೆಯುವರು, ಮತ್ತೆ ಕೆಲವರು ‘ಇದು ಮದ್ದಿಲ್ಲದ ರೋಗ’ ಎಂದು ಛೀಗುಟ್ಟುವರು. ಹುಡುಗ ಯಾವುದರಿಂದಲೂ ಅಧೀರನಾಗಲಿಲ್ಲ. ತನ್ನ ಪರ್ಯಟನೆಯನ್ನು ಮುಂದುವರಿಸಿ ಸುಮರು ಎರಡು ವರ್ಷಗಳ ಕಾಲ ಇಡೀ ಕರ್ನಾಟಕವನ್ನೆಲ್ಲ ಸುತ್ತಿದನು.

ತಾರುಣ್ಯದ ಹೊಸಲಿನಲ್ಲಿ ಬಂದು ನಿಂತಿದ್ದ ರಾಘವೇಂದ್ರನಿಗೆ ತನ್ನ ಬಾಳಗುರಿ ಎಲ್ಲೋ ಹಳಿತಪ್ಪಿದೆ ಎನ್ನಿಸಿತು. ಸಾಕಷ್ಟು ವಯಸ್ಸಾದ ತಾನು ಕಾಯಕವೇನೂ ಇಲ್ಲದೆ, ತಿರಿದು ತಿನ್ನುತ್ತಾ ದಿಕ್ಕೆಟ್ಟು ಅಲೆಯುವುದು ಅಕ್ಷಮ್ಯ ಅಪರಾಧ; ಯಾವುದಾದರೊಂದು ಉದ್ಯೋಗವನ್ನು ಹಿಡಿದು ಸ್ವಯಾರ್ಜಿತದಿಂದ ಹೊಟ್ಟೆಹೊರೆಯುತ್ತಾ ತನ್ನ ಹೆಗ್ಗುರಿಯತ್ತ ದೃಷ್ಟಿ ಹಾಯಿಸಬೇಕೆಂದು ಆತ ನಿಶ್ಚಯಿಸಿದ. ‘ಅಂಬಾ ಪ್ರಸಾದಿತ ನಾಟಕ ಮಂಡಲಿ’ ಅಲ್ಲೇ ಸಮೀಪದಲ್ಲೆಲ್ಲೋ ಬಿಡಾರ ಹೂಡಿದೆ ಎಂದು ತಿಳಿದು ಬಂತು. ಅದರ ಮಾಲಿಕರಾದ ರಂಗನಾಥ ಭಟ್ ಮುಂಡಾಜೆ ದಕ್ಷಿಣಕನ್ನಡ ಜಿಲ್ಲೆಯವರು, ಸಜ್ಜನರು, ಗುಣಗ್ರಾಹಿಗಳು, ಉದಾರಚರಿತರು. ಯುವಕ ರಾಘವೇಂದ್ರ ಅವರ ಬಳಿಗೆ ಹೋದ. ಒಡನೆಯೇ ಆಶ್ರಯ ದೊರೆಯಿತು. ರಾಘವೇಂದ್ರನ ಒಂದೇ ಗುರಿಗೆ ಎರಡು ಹಕ್ಕಿ ಬಿದ್ದಂತಾಯಿತು-ಇತ್ತ ಉದ್ಯೋಗಶೀಲನಾದಂತಾಯಿತು, ಅತ್ತ ಕಲಾಸೇವೆ ಮಾಡಿದಣ್ತೆಯೂ ಆಯಿತು. ತನ್ನ ನಡತೆ ನಡವಳಿಕೆಯಿಂದ ಆತ ಮಾಲಿಯಿಂದ ಹಿಡಿದು ಮಾಲೀಕನವರೆಗೆ ನಾಟಕಮಂಡಲಿಯವರಿಗೆಲ್ಲ ಅಚ್ಚುಮೆಚ್ಚಿನವನಾದ; ತನ್ನ ಅಭಿನಯ ಕಲೆಯಿಂದ ನಾಟಕದ ಪ್ರೇಕ್ಷಕರಿಗೂ ಪ್ರಿಯನಾದ. ಆತನ ಕಾರ್ಯನಿಷ್ಠೆ, ಪ್ರಾಮಾಣಿಕತನ, ವ್ಯವಹಾರ ದಕ್ಷತೆಗಳನ್ನು ಕಂಡ ಮಾಲಿಕರು ಮಂಡಲಿಯ ಆರ್ಥಿಕ ವ್ಯವಹಾರವನ್ನೆಲ್ಲ ಆತನಿಗೇ ವಹಿಸಿದರು. ಮಂಡಲಿಯಲ್ಲಿ ಆತನೊಂದು ಅನಿವಾರ್ಯವಾದ ಅಂಗವಾದ. ಏನಾದರೇನು? ಬೆನ್ನು ಹತ್ತಿದ ಬೇತಾಳದಂತೆ ಆತನಿಗೆ ಗಂಟು ಬಿದ್ದಿದ್ದ ಅಪಸ್ಮಾರಿ ರೋಗ ದಿನದಿನಕ್ಕೂ ಪ್ರಬಲಿಸಿ, ಆತನ ನೆತ್ತರನ್ನು ಹೀರುತ್ತಾ ಹೋಯಿತು. ಆತನನ್ನು ಪರೀಕ್ಷಿಸಿದ ವೈದ್ಯರು ಆ ರೋಗವೇ ಆತನಿಗೆ ಮಾರಕವೆಂದು,ಆತನ ಕಡೆಯದಿನ ಹೆಚ್ಚು ದಿನವಿಲ್ಲ ಎಂದು ತಿಳಿಸಿದರು. ಇದನ್ನು ಕೇಳಿ ನಾಟಕ ಮಂಡಲಿ ನಿಟ್ಟುಸಿರಿಟ್ಟಿತು.

‘ಕಲಿಯುಗ ಭೀಮ’ ಎಂದು ಪ್ರಖ್ಯಾತರಾಗಿದ್ದ ಪಳನಿ ಸ್ವಾಮಿಗಳು ಆಗಾಗ ಅಂಬಾ ಪ್ರಸಾದಿತ ನಾಟಕ ಮಂಡಲಿಗೆ ಭೇಟಿ ಕೊಡುತ್ತಿದ್ದ ರೂಢಿ. ಅವರು ತಮಿಳರು. ಪ್ರಾಚ್ಯ, ಪಾಶ್ಚಾತ್ಯ ಅಂಗ ಸಾಧನೆಯಲ್ಲಿ ನಿಪುಣರಾಗಿದ್ದ ಅವರು ಯೋಗವಿದ್ಯೆಯಲ್ಲಿಯೂ ಆಳವಾದ ಪರಿಶ್ರಮ ಪಡೆದಿದ್ದರು. ಅವರು ನಿತ್ಯರೋಗಿಯಾದ ರಾಘವೇಂದ್ರನನ್ನು ಕಂಡು ‘ಇವನ ರೋಗಕ್ಕೆ ಯೋಗ ಸಾಧನೆಯೇ ಸರಿಯಾದ ಮದ್ದು’ ಎಂದರು. ತಾವು ಅವನನ್ನು ನಿರೋಗಿಯಾಗಿ ಮಾಡುವುದಾಗಿಯೂ ಹೇಳಿದರು. ರಾಘವೇಂದ್ರ ಅವರ ಶಿಶ್ಯನಾದ. ಕೂಲಿಯ ಹೆಣದಂತಿದ್ದರೂ ಆಸಾಮಿ ತುಂಬಾ ಜಿಗುಟು; ಪ್ರಾಣವನ್ನು ಪಣವಾಗಿ ಒಡ್ಡಿ ಅಭ್ಯಾಸ ಮಾಡಿದ. ಇದರ ಫಲವಾಗಿ ಆತನ ಬಡಕಲ ಮೈ ದಿನದಿನಕ್ಕೆ ತುಂಬಿಕೊಳ್ಳುತ್ತಾ ಹೋಯಿತು. ಹೀಗಿರಲು, ಒಂದುದಿನ ಅಂಗಸಾಧನೆ ಮಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಆತನ ಉಸಿರು ಕಟ್ಟಿತು. ಇನ್ನೇನು ಆತನ ಕತೆ ಮುಗಿದು ಹೋಗುವಂತೆ ಕಾಣಿಸಿತು. ಆಗ ಗುರುಗಳು ಆತನ ಎದೆಯನ್ನು ಮೃದುವಾಗಿ ಸವರುತ್ತಾ ಹೋದರು. ಮರು ನಿಮಿಷದಲ್ಲಿ ಆತ ಚೇತರಿಸಿಕೊಂಡ. ಏನೀ ಪವಾಡ? ಆರಿಹೋಗಲಿದ್ದ ಜೀವವನ್ನು ಪುನರುಜ್ಜೀವನಗೊಳಿಸಿತ್ತು, ಗುರುಗಳ ಅಂಗಮರ್ದನ ಕಲೆ. ರಾಘವೇಂದ್ರನ ಜ್ಞಾನಪಿಪಾಸೆ ಗುರುಗಳಿಂದ ಆ ಕಲೆಯನ್ನು ಕುಡಿದು ತೃಪ್ತಿ ಹೊಂದಿತು. ಆತನ ಅಪಸ್ಮಾರಿ ರೋಗ ಸಂಪೂರ್ಣವಾಗಿ ಗುಣವಾಗದಿದ್ದರೂ ಆತನ ಶಕ್ತಿ ವೃದ್ಧಿಯಾಯಿತು, ದೇಹ ಮಾಂಸಲವಾಯಿತು. ಆದರೆ ಆತನ ಹೆಗ್ಗುರಿ ದೈವಸಾಕ್ಷಾತ್ಕಾರವಷ್ಟೆ? ಈ ಪ್ರಶ್ನೆಯನ್ನು ಎತ್ತುತ್ತಲೇ ಸ್ವಾಮಿಗಳು ನಗುತ್ತಾ ಗಾರಿಕೆಯ ಉತ್ತರ ಕೊಟ್ಟರು-‘ದೇವರು ಬಯಸಿದೊಡನೆಯೇ ಸಿಕ್ಕುವುದಿಲ್ಲ, ಅದಕ್ಕೆ ಸಾಧನೆ ಬೇಕು. ಶರೀರ ಮಾದ್ಯಂ ಖಲು ಧರ್ಮ ಸಾಧನಂ? ವಜ್ರ ಕಾಯವನ್ನು ಮೊದಲು ಸಂಪಾದಿಸಿ.’ ನೊಂದ ರಾಘವೇಂದ್ರ, ತಮ್ಮ ಹುಟ್ಟುಹಬ್ಬದ ದಿನ (ಯುಗಾದಿಯ ಹಿಂದಿನ ದಿನ) ಬೆಳಗು ಮುಂಜಾನೆ ಯಾರಿಗೂ ಹೇಳದೇ ಕೇಳದೇ ಮತ್ತೊಮ್ಮೆ ವಿಶಾಲ ಜಗತ್ತಿನಲ್ಲಿ ಸತ್ಯಾನ್ವೇಷಣೇ ನಡೆಸುತ್ತಾ ಹೊರಟರು.

ಮಹಾರಾಷ್ಟ್ರದ ಶಿವಾನಂದರು ಸಂತ ಸಾರ್ವಭೌಮರೆಂದು ಲೋಕ ಕೀರ್ತಿಸುತ್ತಿದ್ದುದನ್ನು ರಾಘವೇಂದ್ರ ಕೇಳಿದ್ದ. ಅವರಿಂದ ತನ್ನ ಆಸೆ ನೆರವೇರುವುದೆಂದು ಆತನ ಅಂತರಂಗ ಹೇಳುತ್ತಿತ್ತು. ಅವರು ಸುಪ್ರಸಿದ್ಧ ಸ್ಥಳವಾದ ಫಂಡರಾಪುರದಲ್ಲಿ ಬೀಡು ಬಿಟ್ಟಿರುವರೆಂದು ತಿಳಿದು ಬಂತು. ಅವರನ್ನು ಕಾಣಬೇಕೆಂಬ ಹೆಬ್ಬಯಕೆಯಿಂದ ರಾಘವೇಂದ್ರ ಹಲವಾರು ದಿನಗಳವರೆಗೆ ನಡೆನಡೆದು, ನಡುನಡುವೆ ಅಪಸ್ಮಾರೀ ರೋಗದಿಂದ ಪ್ರಜ್ಞೆ ಇಲ್ಲದೇ ಬಿದ್ದಿದ್ದು ಅಂತೂ ಹೇಗೋ ಫಂಡರಾಪುರವನ್ನು ಸೇರಿದರು. ಆದರೆ ಅವನ ಪಾಲಿಗೆ ಅಲ್ಲಿ ಸಿಕ್ಕಿದುದು ನಿರಾಶೆ ಮಾತ್ರ. ಶ್ರೀ ಶಿವಾನಂದರು ಹಿಂದಿನ ದಿನವೇ ಅಲ್ಲಿಂದ ಪುಣೆಗೆ ಪ್ರಯಾಣ ಬೆಳೆಸಿದ್ದರು. ಹತಾಶನಾದ ರಾಘವೇಂದ್ರ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿ, ವಿಠೋಬ ರಕುಮಾಯಿಯರ ದರ್ಶನ ಮಾಡಿದ. ಯಾರೋ ಭಕ್ತರು ನೀಡಿದ ಒಣಕಲಿ ರೊಟ್ಟಿಯನ್ನು ತಿಂದು ಮರವೊಂದರ ಕೆಳಗೆ ವಿಶ್ರಾಂತಿಯನ್ನು ಪಡೆದ. ಫಂಡರಾಪುರದಂತಹ ಜಾಗೃತ ಸ್ಥಳದಲ್ಲಿ ಸಾಧುಸಂತರಿಗೆ ಕೊರತೆಯೇ? ಕಾವಿ ಉಟ್ಟವರನ್ನು, ಬೂದಿ ಬಳಿದವರನ್ನು ಪ್ರಶ್ನಿಸಿದ ‘ನೀವು ದೇವರನ್ನು ನೋಡಿರುವಿರಾ? ನನಗೆ ತೋರಿಸುವುರಾ?’ ಎಂದು. ಆದರೆ ಈ ಅಭಿನವ ವಿವೇಕಾನಂದನಿಗೆ ದೇವರನ್ನು ತೋರಿಸುವೆನೆನ್ನುವರಾಮಕೃಷ್ಣರಾರೂ ಅಲ್ಲಿ ಸಿಕ್ಕಲಿಲ್ಲ. ಒಂದು ತಿಂಗಳ ಕಾಲ ಆ ಪುಣ್ಯಕ್ಷೇತ್ರದಲ್ಲಿ ಅಲೆಯುತ್ತಿದ್ದ ಈ ಅನ್ವೇಷಕ ಬಂದ ದಾರಿಗೆ ಸುಂಕವಿಲ್ಲವೆಂದು ತನ್ನ ಕಾಲುಗಳನ್ನು ಪುಣೆಯತ್ತ ತಿರುಗಿಸಿದ.

ಮತ್ತೊಮ್ಮೆ ಹಲವಾರು ದಿನಗಳವರೆಗೆ ಬರಿಗಾಲಲ್ಲಿ ಮಾರ್ಗ ಕ್ರಮಣ. ಸತ್ತು ಸುಣ್ಣವಾಗಿ ಪುಣೆಯನ್ನು ಸೇರಿದುದಾಯಿತು. ಆದರೆ ಮೊರಡಿಯಲ್ಲಿ ಮೊದಲ ಫಲ ಸಿಕ್ಕುವುದು ಹೇಗೆ? ಆ ಮಹಾ ನಗರದಲ್ಲಿ ಮರಾಠಿಭಾಷೆ ಬರದ ತಾನು ಶಿವಾನಂದರನ್ನು ಪತ್ತೆ ಮಾಡುವುದು ಹೇಗೆ? ಕಲಾಜಗತ್ತಿನಲ್ಲಿ ತಾನು ಸಾಧಿಸಿದ್ದ ಹಾವ ಭಾವ ವಿಲಾಸ ವಿಭ್ರಮಗಳಿಂದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಬೆಳಗಿನಿಂದ ಸಂಜೆಯವರೆಗೆ ಅಲೆದುಬಹು ಕಷ್ಟದಿಂದ ಅವರ ನೆಲೆಯನ್ನು ಗೊತ್ತುಮಾಡಿಕೊಂಡು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ಮತ್ತಾವುದೋ ಬಡಾವಣೆಯಲ್ಲಿರುವ ಭಕ್ತರ ಮನೆಗೆ ಹೋಗಿರುವರು; ಮತ್ತೆ ಅದನ್ನು ಅರಸಿಕೊಂಡು ಅಲೆಯುವುದು; ಪುನಃ ಆಶಾ ಭಂಗ. ಹೀಗೆಯೇ ಸುಮಾರು ಇಪ್ಪತ್ತು ದಿನಗಳು ಉರುಳಿ ಹೋದವು. ಹೊಟ್ಟೆಗೆ ಹಿಟ್ಟಿಲ್ಲದೆ ಅಲೆದಲೆದು ಆತ ಕಂಗಾಲಾಗಿಹೋದ. ಇಪ್ಪತ್ತೊಂದನೆಯ ದಿನ ಹೀಗೆಯೇ ಅಲೆಯುತ್ತಾ ಸಂಜೆಯವೇಳೆಗೆ ಸುಸ್ತಾಗಿ ಬವಳಿ ಬಂದಂತಾಗಳು ಒಂದು ಅಂಗಡಿಯ ಮುಂದೆ ನೆರಳಿನಲ್ಲಿ ಕೂತ. ಅದರ ಇದಿರಿನಲ್ಲಿ ಒಂದು ಪುಸ್ತಕದ ಅಂಗಡಿ. ಆಜಾನು ಬಾಹುವಾದ ಮಹಾಪುರುಷನೊಬ್ಬನು ಅಲ್ಲಿ ಪುಸ್ತಕಗಳ ವ್ಯಾಪಾರ ಮಾಡುತ್ತಿದ್ದ. ಆತನ ತಲೆಯ ಕೂದಲು, ಉದ್ದವಾದ ಗಡ್ಡ, ಹೊಳೆಯುವ ಕಣ್ಣುಗಳು, ತೆಜಃ ಪುಂಜವಾದ ಮುಖ-ಇವುಗಳೆಲ್ಲ ತನಗೆ ಪರಿಚಿತವಾದುದೆನ್ನಿಸಿತು. ಆತನ ಸುತ್ತ ನಾಲ್ಕಾರು ಜನ ನಿಂತು ಆತನ ಆಜ್ಞಾಧಾರಕರಂತೆ ನಡೆದುಕೊಳ್ಳುತ್ತಿದ್ದರು. ರಾಘವೇಂದ್ರ ಅವರಲ್ಲಿ ಒಬ್ಬರನ್ನು ಕುರಿತು ‘ಇವರು ಯಾರು?’ ಎಂದು ಕೇಳಿದ. ಅವರೇ ಶಿವಾನಂದರು ! ತೊಳಲುತರಸುವ ಬಳ್ಳಿ ಕಾಲ್ದುಡುಕಿದಂತಾಯಿತು. ಹರ್ಷ ಪುಳಕಿತನಾದ ಆತ ಆನಂದ ಬಾಷ್ಪಗಳನ್ನು ಸುರಿಸುತ್ತಾ ಆ ಸಂತನ ಪಾದಗಳ ಬಳಿ ಕುಸಿದ. ಆತನನ್ನು ಮೇಲಕ್ಕೆತ್ತಿ ಮೈ ಕೈಗಳನ್ನು ಸವರುತ್ತಾ ಅವನ ಕಥೆಯನ್ನೆಲ್ಲಾ ಆಮೂಲಾಗ್ರವಾಗಿ ಅರಿತುಕೊಂಡ ಶ್ರೀ ಶಿವಾನಂದ ಒಡೆಯನೆ ಆತನನ್ನು ಒಂದು ಜಟಕಾಗಾಡಿಯಲ್ಲಿ ಕೂಡಿಸಿಕೊಂಡು ತಮ್ಮ ಬಿಡಾರಕ್ಕೆ ಕರೆದೊಯ್ದರು.

ಶ್ರೀ ಶಿವಾನಂದ ತೀರ್ಥಸ್ವಾಮೀಜಿಯವರು ಉಜ್ವಲ ರಾಷ್ಟ್ರಾಭಿಮಾನಿ; ಹಿಂದೂ ಧರ್ಮ, ಸಂಸ್ಕೃತಿಗಳಲ್ಲಿ ಅವರಿಗೆ ಅಪಾರವಾದ ಅಭಿಮಾನ. ಅಂಗಸಾಧನೆಯಿಂದ ದೇಹವನ್ನು ಬೆಳೆಸಿದಂತೆಯೇ ಆಧ್ಯಾತ್ಮ ಸಾಧನೆಯಿಂದ ಆತ್ಮಜ್ಞಾನವನ್ನು ಗಳಿಸಿಕೊಂದಿದ್ದವರು. ಯೋಗಶಾಸ್ತ್ರದಲ್ಲಿ ಅವರಿಗಿದ್ದ ಅನುಭವ ಅಪಾರ, ಅದ್ವಿತೀಯ, ಅಸದೃಶ, ಅಗಾಧವಾದ ಶಿಷ್ಯ ಸಂಪತ್ತು ಅವರದು. ಅವರೊಬ್ಬ ಆದರ್ಷಪುರುಷ. ಆತ ರಾಘವೇಂದ್ರನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಮೊದಲು ಒಪ್ಪಲಿಲ್ಲ. ಆದರೆ ರಾಘವೇಂದ್ರನ ಹಟದ ಮುಂದೆ ಅವರ ನಿಶ್ಚಯ ನಿಲ್ಲಲಿಲ್ಲ. ಅವರು ಒಡ್ಡಿದ ಪರೀಕ್ಷೆಯ ಒರೆಗಲ್ಲಮೇಲೆ ಹದಿನಾರಾಣೆಯ ಬಣ್ಣವನ್ನು ಬಿಟ್ಟ ಈ ಚಿನ್ನವನ್ನು ಅವರು ಸ್ವೀಕರಿಸಿದರು. ತಮ್ಮೊಡನೆ ಈ ಹೊಸ ಶಿಷ್ಯನನ್ನು ಕಟ್ಟಿಕೊಂಡು ನಾಡುಗಳನ್ನು ಸುತ್ತುತ್ತಾ ತಮ್ಮ ಜ್ಞಾನ ಭಂದಾರವನ್ನೆಲ್ಲಾ ಅವನಿಗೆ ಧಾರೆಯೆರೆದರು. ಅಷ್ಟೇ ಅಲ್ಲ, ತಮ್ಮ ಈ ಮಮತೆಯ ಕೂಸನ್ನು ತಮ್ಮ ಗೆಳೆಯರಾದ ಬರೋಡದ ಮಾಣಿಕ್ಯರಾಯರಲ್ಲಿಗೆ ಕರೆದೊಯ್ದು, ಈ ಅಮೂಲ್ಯ ರತ್ನವನ್ನು ಸಾನೆ ಹಿಡಿಯುವಂತೆ ಹೇಳಿ ಒಪ್ಪಿಸಿದರು.

ಪ್ರೊಫೆಸರ್ ಮಾಣಿಕ್ಯರಾಯರು ಶಿವಾನಂದರಂತೆಯೇ ಉಜ್ವಲ ರಾಷ್ಟ್ರಪ್ರೇಮಿಗಳು. ಆದರೆ ಕ್ರಾಂತಿ ಕಾರಿಗಳು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಸತ್ಯಾಗಹಕ್ಕಿಂತ ಶಕ್ತಿ ಪ್ರದರ್ಶನವೇ ಸರಿಯಾದ ಮಾರ್ಗವೆಂದು ನಂಬಿದ್ದವರು. ಅವರು ಬರೋಡಾದಲ್ಲಿ ‘ಜುಮ್ಮಾದಾದಾ ವ್ಯಾಯಾಮಶಾಲೆ’ಯನ್ನು ಸ್ಥಾಪಿಸಿ, ವ್ಯಾಯಾಮವ್ಯಾಜದಿಂದ ಯುವಕರಿಗೆ ಯುದ್ಧ ವಿದ್ಯೆಯನ್ನು ಬೋಧಿಸುತ್ತಿದ್ದರು. ನೈಷ್ಠಿಕ ಬ್ರಹ್ಮಚಾರಿಯಾದ ಈ ಅಭಿನವ ಭೀಷ್ಮನಿಗೆ ಈ ಹೊಸ ಶಿಷ್ಯನಲ್ಲಿ ತುಂಬ ಮಮತೆ ಬೆಳೆಯಿತು. ಅವನು ಅವರ ಪ್ರೀತಿಯ ‘ಕರ್ಣಾಟಕಿ’ಯಾದ. ಶ್ರೀ ರಾಘವೇಂದ್ರ ಸ್ವಾಮೀಜಿ ಹೇಳುತ್ತಾರೆ-‘ಅವರಲ್ಲಿ ನಾನು ಲಾಠಿ, ಕಾಟ, ಭರ್ಚಿ, ಪಟ್ಟ, ತಲವಾರ್, ಬಂದೇಶ, ಡ್ಯಾಗರ್-ಫೈಟಿಂಗ್, ಜಿಜುಟ್ಸು, ಕುಸ್ತಿ ಮೊದಲಾದ ವೀರ ವ್ಯಾಯಾಮಗಳನ್ನು; ದಂಡ, ಬೈಠಕ್, ಕರೇಲ್, ಜೋಡಿ, ಮಲ್ಲಕಂಬ, ಸ್ಪ್ರಿಂಗ್ ಡಂಬಲ್ಸ್, ವೈಟ್ ಡಂಬಲ್ಸ್, ವೈಟ್ ಲಿಫ್ಟಿಂಗ್, ರೋಮನ್ ರಿಂಗ್ಸ್ ಮೊದಲಾದ ದೈಹಿಕ ಶಕ್ತಿಯ ಬೆಳವಣಿಗೆಗೆ ಸಂಭಂಧಪಟ್ಟ ವ್ಯಾಯಾಮಗಳನ್ನೂ ಅಲ್ಲದೆ ಲೇಜಿಮ್, ಡಂಬಲ್ಸ್, ಬಾಲ ಕವಾಯತ್, ಬೋಥಾಟ, ಸರ್ವಾಂಗ ಸುಂದರ ವ್ಯಾಯಾಮ-ಮುಂತಾದ ಕ್ರೀಡಾವ್ಯಾಮಗಳ ಶಿಕ್ಷಣವನ್ನು ಪಡೆದೆನು’. ಇವುಗಳಲ್ಲಿ ಉತ್ತೀರ್ಣನಾದನೆಂಬುದಕ್ಕೆ ಬಿ.ಪಿ.ಸಿ (ಬ್ಯಾಚುಲರ್ ಆಫ್ ಫಿಸಿಕಲ್ ಕಲ್ಚರ್) ಡಿಗ್ರಿಯನ್ನೊಳಗೊಂಡ ಶಿಫಾರಸು ಪತ್ರವೂ ದೊರೆಯಿತು.

ಆಸನ ಪ್ರಾಣಾಯಾಮಾದಿ ಯೋಗವಿದ್ಯೆಯನ್ನೂ, ದಂಡ, ಬೈಠಕ್ ಮೊದಲಾದ ವೀರ ವ್ಯಾಯಾಮಗಳನ್ನೂ ಕಲಿಯುವಾಗ ಅವುಗಳಿಂದ ಸಾಧಿಸಬಹುದಾದ ರೋಗನಿವಾರಕ ಶಕ್ತಿಯನ್ನು ಗುರುಮುಖದಿಂದಲೂ ಸ್ವಾನುಭವದಿಂದಲೂ ಕಲಿತುಕೊಂಡಿದ್ದ ಶ್ರೀ ರಾಘವೇಂದ್ರನಿಗೆ (ಈ ವೇಳೆಗೆ ಆತನ ಅಪಸ್ಮಾರಿ ರೋಗ ಹೋಗಿ ಆತನ ದೇಹ ಅಪರಂಜಿಯಾಗಿತ್ತು.) ವೈದ್ಯವಿದ್ಯೆಯತ್ತ ಗಮನ ಹರಿಯಿತು. ಅಲ್ಲದೆ ‘ದೇಶಸೇವೆಯೇ ಈಶಸೇವೆ, ಜನರ ಸೇವೆಯೇ ಜನಾರ್ಧನನ ಸೇವೆ. ತನ್ನೊಬ್ಬನ ಉದ್ದಾರಕ್ಕಿಂತ ಲೋಕೋದ್ಧಾರ ದೊಡ್ಡದು’ ಎಂಬ ಮಹಾಸತ್ಯ ಗೋಚರವಾಯಿತೆಂದು ತೋರುತ್ತದೆ. ಆತನು ತನ್ನ ಅಪೇಕ್ಷೆಯನ್ನು ಪೂಜ್ಯ ಗುರುಗಳಾದ ಶಿವಾನಂದರಲ್ಲಿ ನಿವೇದಿಸಿದ. ಇದನ್ನು ಕೇಳಿ ಅವರಿಗೆ ಪರಮ ಸಂತೋಷವಾಯಿತು. ಕಬ್ಬಿಣ ಕಾದಿರುವಾಗಲೇ ಅದನ್ನು ಸಾಗಬಡಿಯಬೇಕೆಂದು ಒಡನೆಯೇ ಆತನನ್ನು ಲಾಹೋರಿನ ಬಾಬಾ ಲಕ್ಷ್ಮಣದಾಸ ಸಾಧು ಎಂಬುವರಲ್ಲಿ ಕರೆದೊಯ್ದರು. ಬಾಬಾರವರು ಒಬ್ಬ ಜೈನ ಮುನಿಗಳು. ಅವರಿಗೆ ಆಯುರ್ವೇದದಲ್ಲಿ ಅಪಾರವಾದ ಅನುಭವ, ಆಳವಾದ ಜ್ಞಾನ ಇದ್ದವು. ಯೋಗ ವಿದ್ಯೆಯೂ ಅವರಿಗೆ ಕರತಲಾಮಲಕವಾಗಿತ್ತು. ಆದರೆ ಶಿವಾನಂದರಿಗೂ ಬಾಬಾರವರಿಗೂ ಏಕೋಏನೋ ಅಷ್ಟು ಹೊಂದಿಕೆ ಇರಲಿಲ್ಲ ಎಂದು ತೋರುತ್ತದೆ. ಶಿವಾನಂದರು ಶಿಶ್ಯನನ್ನು ಬಾಬಾರವರ ಕುಟೀರದ ಬಳಿ ಬಿಟ್ಟು ಹೊರಟು ಹೋದರು. ರಾಘವೇಂದ್ರ ಎರಡು ವರ್ಷಗಳ ಕಾಲ ಅವರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದು ಆಯುರ್ವೇದದಲ್ಲಿ ಪಾರಂಗತನಾದ. ಅವರಿಂದ ಭಕ್ತಿ, ಜ್ಞಾನ, ರಾಜಕರ್ಮಯೋಗಗಳ ಸಮನ್ವಯ ಯೋಗವನ್ನು ಆತ ಅರ್ಥ ಮಾಡಿಕೊಂಡ. ‘ಭಗವಂತ ಎಲ್ಲಿಯೂ ಇದ್ದಾನೆ, ನನ್ನೊಳಗೆ ಇದ್ದಾನೆ, ನಾನೇ ಅವನಾಗಿದ್ದೇನೆ’ ಎಂಬ ನಿತ್ಯ ಸತ್ಯದ ಅರಿವೂ ಆತನಿಗುಂಟಾಯಿತು. ಆತ ಇನ್ನೂ ಅಲ್ಲಿಯೇ ಕೆಲ ದಿನ ಇದ್ದು ತನ್ನ ಶಿಷ್ಯವೃತ್ತಿಯನ್ನು ಮುಂದುವರಿಸಬಹುದಾಗಿತ್ತೋ ಏನೋ! ಹಾಗಾಗಲಿಲ್ಲ. ಒಂದುದಿನ ಮಾತಿನ ಮಧ್ಯದಲ್ಲಿ ಬಾಬಾ ಶಿಶ್ಯನೊಡನೆ ‘ಮಗೂ, ನೀನು ಶಿವಾನಂದರಿಗೆ ಬದಲಾಗಿ ನನ್ನನ್ನು ನಿನ್ನ ಗುರುವೆಂದು ಸ್ವೀಕರಿಸು. ನಾನು ನನ್ನ ಸರ್ವಶಕ್ತಿಯನ್ನೂ ನಿನಗೆ ಧಾರೆಯೆರೆದು ಕೊಡುತ್ತೇನೆ’ ಎಂದರು. ರಾಘವೇಂದ್ರ ಪ್ರತ್ಯುತ್ತರ ನೀಡಲಿಲ್ಲ. ಆ ಕ್ಷಣದಲ್ಲಿಯೇ ಬಾಬಾರವರ ಕುಟೀರವನ್ನು ತ್ಯಜಿಸಿ ಹೊರಟು ಹೋದನು. ಈ ಸುದ್ದಿಯನ್ನು ಕೇಳಿದಾಗ ಶ್ರೀ ಶಿವಾನಂದರು ಶಿಷ್ಯನನ್ನು ಲಘುವಾಗಿ ಟೀಕಿಸಿದರಾದರೂ ಆತನ ನಿಷ್ಠೆಯನ್ನು ಮನಸ್ಸಿನಲ್ಲಿಯೇ ಮೆಚ್ಚಿಕೊಂಡರು.

Previous…

Next…