ನೈಷ್ಠಿಕ ಬ್ರಹ್ಮಚಾರಿಯಾದ ಶ್ರೀ ರಾಘವೇಂದ್ರ ಸ್ವಾಮೀಜಿ ತಮ್ಮ ಈ ರ ಹರೆಯದಲ್ಲಿಯೂ ತರುನರನ್ನೂ ನಾಚಿಸುವಷ್ಟು ಉತ್ಸಾಹದ ಬುಗ್ಗೆಯಾಗಿದ್ದಾರೆ. ಈ ಸಿಡಿಲಮರಿ ಒಂದು ವ್ಯಕ್ತಿಯಲ್ಲ, ಮಂತ್ರಪೂತವಾದ ಒಂದು ಮಹಾಶಕ್ತಿ. ಅವರನ್ನು ಕುರಿತು ಹಲವು ಪವಾಡಗಳನ್ನು ಜನ ಹೇಳುತ್ತಾರೆ. ಅವರ ಒಂದೊಂದು ಕಾರ್ಯವೇ ಒಂದೊಂದು ಪವಾಡದಂತೆ ಇರುವಾಗ, ಪವಾಡವನ್ನು ಮೀರಿಸಿರುವಾಗ- ಇವುಗಳ ಮುಂದೆ ಆ ಪವಾಡಗಳು ನೀರಸ. ಸನ್ಯಾಸಿಯಾದರೂ ವಿಶ್ವಕುಟುಂಬಿಯಾಗಿರುವ ಈ ಮಹಾ ತಿರುಕರ ಕಾರ್ಯಕ್ಷೇತ್ರ ವಿಶಾಲವಾಗಿರುವಷ್ಟೇ ವೈವಿಧ್ಯಪೂರ್ಣವಾಗಿದೆ. ವಾರದ ಆರೂ ದಿನಗಳೂ ಅಕ್ಷಯವಾದ ತಮ್ಮ ಭಿಕ್ಷಾಪಾತ್ರೆಯೊಡನೆ ಊರೂರು ಅಲೆಯುತ್ತಿರುವ ಈ ಅಸಾಧಾರಣ ಪುರುಷ ಬಿಡುವಿಲ್ಲದ ತಮ್ಮ ಕಾರ್ಯಕ್ರಮಗಳ ಮಧ್ಯದಲ್ಲಿ ಸಾಹಿತ್ಯಘೋಷ್ಟಿಗೂ ಕೈಹಾಕಿದ್ದಾರೆ. ‘ತಿರುಕ’ ಎಂಬ ಕಾವ್ಯನಾಮದಿಂದ ಕೃತಿ ರಚನೆಗೆ ಕೈಯಿಕ್ಕಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಭಾವಗೀತೆ, ಪ್ರಬಂಧ, ನಾಟಕ, ವಚನ, ಶಾಸ್ತ್ರಗ್ರಂಥ-ಇತ್ಯಾದಿ ಸಾಹಿತ್ಯದ ಯಾವ ಮುಖವೂ ಇವರ ಲೇಖನಿಯಿಂದ ವಂಚಿತವಾಗಿಲ್ಲ. ಸಾಹಿತ್ಯಸೃಷ್ಟಿಗೆ ಅಗತ್ಯವಾದ ಮನಶಾಂತಿ, ಕಾವಾಲಕಾಶಗಳು ಈ ಮಹಾನುಭಾವರಿಗೆ ಹೇಗೆ ದೊರೆಯುತ್ತವೆಯೋ, ಅವರ ಉಪಾಸನಾದೈವವಾದ ಆ ಮಾರುತಿಗೇ ವೇದ್ಯ.
ತ್ಯಾಗ, ಸೇವೆಗಳ ತ್ರಿವಿಕ್ರಮನಂತಿರುವ ಶ್ರೀ ರಾಘವೇಂದ್ರರು ಅಲ್ಪತೃಪ್ತರಲ್ಲ. ಅವರ ಆಸೆ ಅಪಾರವಾದರೂ ಅಲ್ಪವಾದುದಲ್ಲ, ಭೂಮವಾದುದು. ವಿಶ್ವಭಾತೃತ್ವ, ವಿಶ್ವಪ್ರೇಮ, ವಿಶ್ವಕಲ್ಯಾನಗಳ ಹೆಬ್ಬಯಕೆಯನ್ನು ಹೊತ್ತು, ತಾವು ನಿಂತ ನೆಲವನ್ನು ವಿಶ್ವದ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಬೇಕೆಂಬುದು ಅವರ ಹೆಬ್ಬಯಕೆ. ತಾವೀಗ ಆಶ್ರಮದಲ್ಲಿ ಸಾಧಿಸಿರುವುದೆಲ್ಲವೂ ಇನ್ನೂ ಪ್ರಾರಂಭ ಮಾತ್ರ. ಲೋಕಕಲ್ಯಾಣವನ್ನು ತುಂಬಿಕೊಂಡಿರುವ ಅವರ ಕಣ್ಣುಗಳಿಗೆ ಭಿಕ್ಷುಕರ ಸಮಸ್ಯೆ, ಅನಾಥ ಮಹಿಳೆಯರ ಮತ್ತು ಅನಾಥಶಿಶುಗಳ ಸಮಸ್ಯೆ, ವಿಧವಾಸಮಸ್ಯೆ, ಧಾರ್ಮಿಕ ಅಭಾವದ ಸಮಸ್ಯೆ, ಇತ್ಯಾದಿ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತಿವೆ. ಅವುಗಳ ನಿವಾರಣೆಗಾಗಿ ಎಪ್ಪತ್ತೆಂಟು ಲಕ್ಷ ರೂಪಾಯಿಗಳ ಯೋಜನೆಯೊಂದನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆ ಉದಾರಿಗಳಾದವರ ಧನ ಸಹಾಯ ಬೇಕು; ಅದಕ್ಕೂ ಹೆಚ್ಚಾಗಿ ನಿಸ್ವಾರ್ಥವಾಗಿ ದುಡಿಯಬಲ್ಲ ತ್ಯಾಗಿಗಳ ತಂಡವೊಂದು ಬೇಕು. ಅನಾಥಸೇವಾಶ್ರಮ ‘ಉಂಡಾಡಿಗಳ ಧರ್ಮಶಾಲೆಯಲ್ಲ; ಕಾಯಕದ ಕರ್ಮಾಗಾರ’-ಎಂಬುದನ್ನು ಮಾತ್ರ ಮರೆಯದಿದ್ದರೆ ಸಾಕು.
ಅನಾಥಸೇವಾಶ್ರಮಕ್ಕೆ ಕೊಟಿಹಣದ ಆಸ್ತಿಯಿದ್ದರೂ ಶ್ರೀ ರಾಘವೇಂದ್ರರಿಗೆ ಗೊಷ್ಪಾದದಷ್ಟು ಆಸ್ತಿಯೂ ಇಲ್ಲ. ಆಶ್ರಮದ ವ್ಯವಹಾರ ಲಕ್ಷಗಟ್ಟಲೆಯಲ್ಲಿ ನಡೆಯುತ್ತಿದ್ದರೂ ಅದನ್ನು ತಂದು ಹಾಕುವವರ ಬಳಿ ಒಂದು ನಯಾಪೈಸೆಯೂ ಇಲ್ಲ; ಅದರ ವಹಿವಾತೆಲ್ಲ ಕಾರ್ಯದರ್ಶಿಯವರದು. ಆಶ್ರಮಕ್ಕೆ ಬಂದ ಅತಿಥಿಗಳಿಗೆ ರಸಕವಳಸಿಕ್ಕಿದರೂ ಆಶ್ರಮದ ಯಜಮಾನರಿಗೆ ಮಾತ್ರ ಉಪ್ಪು, ಹುಳಿ, ಕಾರಗಳಿಲ್ಲದ ಸಪ್ಪೆಯೂಟ. ಭಕ್ತಾದಿಗಳಿಂದ ಬಗೆ ಬಗೆಯ ಹಣ್ಣು ಹಂಪಲುಗಳು ಯಥೇಚ್ಚವಾಗಿ ಬಂದು ಬಿದ್ದರೂ ಸ್ವಾಮಿಗಳು ತಿನ್ನುವುದು ಮಾತ್ರ ಬಡವರಿಗೆ ಸಾಧ್ಯವಾಗಬಹುದಾದ ಬಾಲೆಯ ಹಣ್ಣು, ಪರಂಗೀ ಹಣ್ಣು. ಶ್ರೀ ಸಾಮಾನ್ಯನಿಗೆ ಎಟುಕದ ಯಾವ ವಸ್ತುವೂ ತನಗೆ ಬೇಡವೆಂಬುದು ಶ್ರೀ ರಾಘವೇಂದ್ರರ ಸತ್ ಸಂಕಲ್ಪ. ಲೋಕಸೇವೆಯಲ್ಲಿ ಈ ದೇಹ ಸವೆಯಲೆಂಬುದು ದಿನ ದಿನವೂ ದೇವರ ಮುಂದೆ ಪ್ರಾರ್ಥನೆ. ಈ ಆದರ್ಶ ಎಷ್ಟು ದೂರ ಹೋಗಿದೆಯೆಂದರೆ, ಸತ್ತಮೇಲೆ ತನ್ನ ದೇಹವನ್ನು ಸುದುವುದೂ ಬೇಡ, ಹೂಳುವುದೂ ಬೇಡ; ಯಾವುದಾದರೂ ಪ್ರಾಣಿಗಳಿಗೆ ಆಹಾರವಾಗುವಂತೆ ವಿನಿಯೋಗವಾಗಲಿ- ಎನ್ನುತ್ತಾರೆ, ಈ ತ್ಯಾಗಮೂರ್ತಿ. ಆಶ್ರಮದ ಆಡಳಿತವನ್ನು ನಿರ್ವಹಿಸಲು ದಕ್ಷರಾದ ಮತ್ತು ಯೋಗ್ಯರಾದ ಮಹನೀಯರನ್ನು ಒಳಗೊಂಡ ಒಂದು ವಿಶ್ವಸ್ತ ಸಮಿತಿಯನ್ನು ಏರ್ಪಡಿಸಿ, ಅದನ್ನು ರಿಜಿಸ್ಟರ್ ಮಾಡಿಸಲಾಗಿದೆ. ಶ್ರೀ ಸ್ವಾಮಿಜಿಯವರ ಅಭಿಪ್ರಾಯದಂತೆ ‘ಜಗ ಎಂದರೆ ಜನಿಸಿ ಗಮಿಸುವ ಕ್ರಿಯಾ ವಿಲಾಸ. ಜನನ-ಗಮನಗಳ ಮಧ್ಯದ ಪಯಣವೇ ಬಾಳು. ಆ ಬಾಳು ಆದರ್ಶವಾದರೆ ಜಗತ್ತನ್ನೇ ಉದ್ಧಾರಮಾಡಿದಂತೆ !’ ಶ್ರೀ ರಾಘವೇಂದ್ರರು ಲೋಕೊದ್ಧಾರವನ್ನು ಸಾಧಿಸಿದ ಧನ್ಯಜೀವಿಗಳಾಗಿದ್ದಾರೆ. ಅವರು ಮುಕ್ಕೋಟಿ ಕನ್ನಡಿಗರ ಹಿರಿಯ ಆಸ್ತಿ. ಇಂತಹ ದೇವಮಾನವರಲ್ಲದೆ ಮತ್ತಾರು ಸಂಭಾವನಾರ್ಹರು ? ಈ ಗ್ರಂಥದ ಸರ್ವಸ್ವವೂ ಆಶ್ರಮದ ಹಿತಕ್ಕೆ ವಿನಿಯೋಗವಾಗಿ ಸಾರ್ಥಕವಾಗುವುದರಿಂದ ನಿಜವಾದ ಅರ್ಥದಲ್ಲಿ ಇದು ‘ಶ್ರೀ ಕೃಷ್ಣಾರ್ಪಣಮಸ್ತು; ಆಗುತ್ತದೆ.
ಶ್ರೀ ಗುರುದೇವನಿಗೆ ಅರ್ಪಿಸುತ್ತಿರುವ ಈ ಸುಧೀರ್ಗ ದಂಡನಮನದಿಂದ ಮೇಲೇಳುವ ಮುನ್ನ ಈ ‘ನಂದನವನ’ವನ್ನು ಇಷ್ಟು ಭವ್ಯವಾಗಿ ಬೆಳೆಸಲು ಸಹಾಯಕರಾದವರನ್ನೆಲ್ಲ ಕೃತಜ್ಞತೆಯಿಂದ ನೆನೆಯುವುದು ಅತ್ಯಂತ ಆನಂದದಾಯಕವಾಗಿರುವಂತೆ ನನ್ನ ಪವಿತ್ರ ಕರ್ತವ್ಯವೂ ಆಗಿದೆ. ಇದರ ಬೃಹತ್ತಿಗೆ ತಕ್ಕಂತೆ ಈ ಹುಲುಸಾದ ಬೆಳೆಗೆ ನೆರವಾದವರ ಸಂಖ್ಯೆಯೂ ಮಹತ್ತಾಗಿಯೂ ಇದೆ. ಇಂತಹ ಕೊಡುಗೆಯೊಂದನ್ನು ಶ್ರೀಯವರಿಗೆ ಅರ್ಪಿಸಬೇಕೆಂಬ ಪ್ರೇರಣೆ ಅಂಕುರಿಸಿದುದು ಅವರ ಪಟ್ಟಶಿಷ್ಯರಾದ ಪೂಜ್ಯ ಶ್ರೀ ಸೂರದಾಸಜೀಯವರ ಮನೋಭೂಮಿಕೆಯಲ್ಲಿ.ಅವರು ಪ್ರೇರಕಶಕ್ತಿಯಾದರೆ ನನ್ನ ಮಾನ್ಯಮಿತ್ರರಾದ ಶ್ರೀಮಾನ್ ಟಿ. ಎಸ್. ರಾಮಚಂದ್ರ ಮೂರ್ತಿಯವರು ಕಾರಕಶಕ್ತಿ. ಅವರು ನಂದನವನಕ್ಕೆ ಅಗತ್ಯವಾದ ಲೇಖನರೂಪೀ ಫಲಪುಷ್ಪ ವೃಕ್ಷಗಳು ಕನ್ನಡನಾಡಿನ ಮೂಲೆಮೂಲೆಗಳಿಂದಲೂ ಬಂದೊದಗಲು ಸಹಾಯಕರಾದರು. ನನ್ನ ಇನ್ನೊಬ್ಬ ಮಿತ್ರರಾದ ಪ್ರೊ. ರಾ. ಸತ್ಯನಾರಾಯಣರು ನಂದನವನಕ್ಕೆ ತಕ್ಕ ಕ್ಷೇತ್ರವನ್ನು ಆಯ್ದು ಹದಗೊಳಿಸಿದರು. ಡಾ. ಶಿವರುದ್ರಪ್ಪ, ಡಾ. ಹಾ. ಮಾ. ನಾಯಕ, ಪ್ರೊ. ರಾಮಚಂದ್ರರಾವ್, ಶ್ರೀ ನಾರಾಯಣ, ಶ್ರೀ ವೈಕುಂಠರಾಜು-ಇವರು ಅದರ ರಕ್ಷಕ ಶಕ್ತಿಯಾಗಿ ನಿಂತರು. ಇಲ್ಲಿಗೆ ಪುರುಷಾರ್ಥಗಳಲ್ಲಿ ಮೊದಲನೆಯದನ್ನು ಸಾಧಿಸಿದಂತಾಯಿತು. ನಮಗೆ ಮೂರು, ನಾಲ್ಕರ ಅಗತ್ಯ ಇಲ್ಲಿ ಅಷ್ಟಾಗಿ ಇಲ್ಲವಾದರೂ ಎರಡನೆಯದು? ನಂದನವನದ ಬೆಳವಣಿಗೆಗೆ ಅಗತ್ಯವಾದ ಜೀವನವೇ ಅರ್ಥ ಅಥವಾ ಹಣ. ನಮ್ಮ ಸಂಭಾವನಾ ಗ್ರಂಥವನ್ನು ಸ್ವೀಕರಿಸುತ್ತಿರುವ ಮಹಾನುಭಾವರು ‘ತಿರುಕ’ರಾದರೆ, ಅರ್ಪಿಸುತ್ತಿರುವ ನಾವು ಅವರ ಶಿಷ್ಯರಾದ ‘ಮರಿ ತಿರುಕರು’. ನಮ್ಮ ಯೋಜನೆಯಾದರೋ ಒಂದು ಲಕ್ಷಕ್ಕೂ ಮೀರಿದುದು. ಇದನ್ನು ಕಾರ್ಯಗತಗೊಳಿಸುವ ಬಗೆ ಹೇಗೆಂದು ತಲೆ ಕೆರೆದುಕೊಳ್ಳುತ್ತಾ ಆಕಾಶದತ್ತ ನೋಡಿದಾಗ ನಮ್ಮ ಸಮಸ್ಯೆ ಬಗೆಹರೆಯಿತು. ಸ್ವರ್ಗಾಧಿಪತಿ ರಾಜದೇವ-ಆತನೇ ಜೀವನಕ್ಕೆ, ಮಳೆಗೆ ಅಧಿದೇವತೆ-ಮತ್ತು ಸಂಕಟ ನಿವಾರಕ ರಂಗನಾಥ-ಈ ಹೆಸರುಗಳು ಹೊಳೆದವು. ಆ ಹೆಸರಿನವರು ನಮ್ಮ ಮಂತ್ರಿಮಂಡಲದಲ್ಲಿ ಇದ್ದುದು ಒಂದು ಸೋಜಿಗ. ನಾವು ಅವರಿಬ್ಬರನ್ನೂ ಪ್ರಾರ್ಥಿಸಿಕೊಂಡೆವು. ನಮ್ಮ ಪ್ರಾರ್ಥನೆಯನ್ನು ಮನ್ನಿಸಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ದೇವದಾಸ ಅರಸರವರು ಮಹಾಪೋಷಕರಾಗಿಯೂ, ಮಾನ್ಯ ಮಂತ್ರಿ ಶ್ರೀ ರಂಗನಾಥರು ಪೋಷಕರಾಗಿಯೂ ನಮ್ಮ ಬೆಂಬಲಕ್ಕೆ ನಿಂತರು. ಆದರೇನು? ‘ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’. ನಾವು ಕೆಲಸ ಮಾಡಿ ಮುಗಿಸದೆ ದೊಡ್ಡವರನ್ನು ಯಾಚಿಸುವುದೆಂತು? ಆದರೆ ಯೋಚನೆಯಿಲ್ಲದೆ ನಮ್ಮ ಕೆಲಸ ಮುಂದುವರಿಸುವುದೆಂತು? ಈ ಬೀಜವೃಕ್ಷ ನ್ಯಾಯವನ್ನು ಭೇದಿಸಲು ನಾವು ನಾಡಿನ ದಾನಿಗಳನ್ನು ಕೊಟ್ಟ ದಾನಿಗಳೂ ನಂದನವನದ ಒಂದು ಪ್ರಗತಿಗಾಗಿ ಐವತ್ತು ರೂಪಾಯಿ ಮುಂಗಡವಾಗಿ ನೀಡಿದ ಉದಾರದಾನಿಗಳೂ ನಮ್ಮ ಸಹಾಯಕ್ಕೆ ಬಂದರು. ಇವರೆಲ್ಲರ ನೆರವೂ ವ್ಯರ್ಥವಾಗುವುದಿಲ್ಲ ಎಂಬುದೊಂದು ಸಮಾಧಾನ; ಏಕೆಂದರೆ ನಂದನವನದಿಂದ ಬರುವ ನಿವ್ವಳ ಆದಾಯವೆಲ್ಲ ಅನಾಥಸೇವಾಶ್ರಮದ ರಚನಾತ್ಮಕ ಕಾರ್ಯಕ್ರಮಗಳಿಗಾಗಿಯೇ ಸಮರ್ಪಿತವಾಗುವುದು.
ಬೆಂಗಳೂರಿನ ನಾಗರಿಕರಿಂದ ಆಯ್ಕೆಯಾದ ಶ್ರೀ ರಾಮೇಗೌಡರೇ ಮೊದಲಾದ ಸ್ವಾಗತ ಸಮಿತಿಯೊಂದರ ಸದಸ್ಯರು ತಲಾ ಸಹಸ್ರ ರೂಪಾಯಿಗಳನ್ನು ನೀಡಿದರು. ಇವುಗಳಿಂದ ನಮ್ಮ ತಾತ್ಕಾಲಿಕ ತಗಾದೆ ನೀಗಲು ಮತ್ತು ಪುಸ್ತಕ ತಲಾ ಸಹಸ್ರ ರೂಪಾಯಿಗಳನ್ನು ನೀಡಿದರು. ಇವುಗಳಿಂದ ನಮ್ಮ ತಾತ್ಕಾಲಿಕ ತಗಾದೆ ನೀಗಲು ಸಾಧ್ಯವಾಯಿತು. ಇವರೆಲ್ಲರನ್ನೂ ನಾನು ಕೃತಜ್ಞತೆಯಿಂದ ನೆನೆದು ವಂದಿಸುತ್ತೇನೆ. ಕರ್ನಾಟಕ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶ್ರೀಮಾನ್ ಕಮಲಾನಾಥರು ‘ನಂದನವ’ನಕ್ಕೆ ಅಗತ್ಯವಾದಷ್ಟು ಸುಲಭ ಬೆಲೆಯ ಕಾಗದವನ್ನು ಭದ್ರಾವತಿಯ ಕಾಗದದ ಕಾರ್ಖಾನೆಯಿಂದ ಕೊಡಿಸಿಕೊಟ್ಟರು; ಆ ಕಾರ್ಖಾನೆಯವರು ಹಣಸಂದಾಯದಲ್ಲಿ ನಮ್ಮಿಂದ ಆದ ವಿಳಂಬವನ್ನು ತಾಳ್ಮೆಯಿಂದ ಸಹಿಸಿ ಸಹಾಯ ಮಾಡಿದರು. ಕನ್ನಡನಾಡಿನ ನೂರಾರು ಜನ ಹೆಸರಾಂತ ಬರಹಗಾರರು ತಮ್ಮ ಅಮೂಲ್ಯವಾದ ಲೇಖನಿಗಳಿಂದ ನಮ್ಮನ್ನು ಕೃತಕೃತ್ಯರನ್ನಾಗಿ ಮಾಡಿದ್ದಾರೆ. ನನ್ನ ಮಾನ್ಯ ಮಿತ್ರರಾದ ಶ್ರೀ ಎ. ಕೃಷ್ಣ ಮೂರ್ತಿಯವರು ಲೇಖನಗಳನ್ನು ವಿಂಗಡಿಸಿ, ಪರಿವಿಡಿಯನ್ನು ನಿರ್ಧರಿಸುವಲ್ಲಿ ನನಗೆ ಸಹಾಯವನ್ನು ನೀಡಿದ್ದಾರೆ. ಕಲಾವಿದ ಶ್ರೀ ನರಸಿಂಹನ್ ಅವರು ರಕ್ಷಾಕವಚದ ವರ್ಣಚಿತ್ರವನ್ನು ಬರೆದುಕೊಟ್ಟಿದ್ದಾರೆ; ಗೆಳೆಯ ಕಲಾವಿದ ಶ್ರೀ ಪಿ. ಆರ್. ತಿಪ್ಪೇಸ್ವಾಮಿಯವರು ಲೇಖನಗಳನ್ನು ಒದಗಿಸುವುದರಲ್ಲಿ, ಗ್ರಂಥವನ್ನು ಕಲಾತ್ಮಕವಾಗಿ ಹೊರತರುವುದರಲ್ಲಿ ಸಹಾಯ ಸಹಕಾರಗಳನ್ನು ನೀಡಿದ್ದಾರೆ. ಶ್ರೀ ಗಂಗಾಧರ ಆಚಾರ್ಯರು ಆಶ್ರಮದ ಮತ್ತು ಶ್ರೀ ಶ್ರೀ ಸ್ವಾಮಿಜಿಯವರ ಛಾಯಾ ಚಿತ್ರಗಳನ್ನು ಒದಗಿಸಿದ್ದಾರೆ. ಇವರೆಲ್ಲರಿಗೂ ನಾನು ಚಿರಋಣಿ. ಕಾಲಮೀರಿಬಂದ ಕೆಲವು ಲೇಖನಗಳನ್ನು ಸ್ವೀಕರಿಸಲಾಗದಿದ್ದುದಕ್ಕಾಯೂ, ಕೆಲವು ಲೇಖನಗಳಲ್ಲಿ ಅನಿವಾರ್ಯವಾಗಿ ಸಂಪಾದಕನ ಕತ್ತರಿಯನ್ನು ಬಳಸಬೇಕಾಗಿ ಬಂದುದಕ್ಕಾಗಿಯೂ ನಾನು ಆಯಾ ಲೇಖಕರ ಕ್ಷಮೆಯನ್ನು ಯಾಚಿಸುತ್ತೇನೆ. ಕಡೆಯದಾಗಿ ‘ಶ್ರೀ ಸದ್ಗುರು ಪ್ರಿಂಟರ್ಸ್ ‘ ಮಾಲೀಕರಾದ ಶ್ರೀ ಆರ್. ವಿ. ಸದಾಶಿವಮೂರ್ತಿ ಮತ್ತು ಆರ್. ಎಸ್ ವಾಸು ಅವರಿಂದ ಆಗಿರುವ ಉಪಕಾರ ಮಾತಿಗೆ ಮೀರಿದುದು. ಪುಸ್ತಕವನ್ನು ಸಕಾಲಕ್ಕೆ ಅಂದವಾಗಿ ಮುದ್ರಿಸಿಕೊಟ್ಟುದು ಮಾತ್ರವೇ ಅಲ್ಲ; ಲೇಖನ ಸಂಗ್ರಹದಿಂದ ಹಿಡಿದು ಅರ್ಥ ಸಂಗ್ರಹದವರೆಗೆ ಎಲ್ಲದರಲ್ಲಿಯೂ ಅವರು ನಮ್ಮೊಡನೆ ಸಮಭಾಗಿಗಳಾಗಿ ಶ್ರಮಿಸಿದ್ದಾರೆ. ಅವರನ್ನು ಹೃತ್ಪೂರ್ವಕವಾಗಿ ವಂದಿಸಿ, ‘ ಶ್ರೀ ಸದ್ಗುರು ಪ್ರಿಂಟರ್ಸ್ ‘ನ ಕಾರ್ಮಿಕ ವರ್ಗದವರನ್ನು ಅಭಿನಂದಿಸುತ್ತೇನೆ.