ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ನಮ್ಮ ಬಗ್ಗೆ

ಅನಾಥಸೇವಾಶ್ರಮವೆಂಬ ಬಂಜರು ನಾಡಿನ ಕಲ್ಪವೃಕ್ಷ

ಬಾರಕೂರಿನ ಬಾ. ರಾಘವೇಂದ್ರರಾವ್ ಎಂಬ ತರುಣರು. ಬಾಲ್ಯದಿಂದಲೇ ದೇವರನ್ನು ಕಾಣುವ ಹುಚ್ಚನ್ನು ಹಿಡಿಸಿಕೊಂಡ ಇವರು ಮಠ, ಮಂದಿರಗಳೆಂದು ಅಲೆದಾಡುತ್ತಾ ಕಂಡ ಕಂಡ ಸಾಧು ಸಂತರನ್ನು ಭೇಟಿಯಾಗಿ ಬೇಡಿಕೊಳ್ಳುತ್ತಾ ಕೊನೆಗೆ ಸ್ವಾಮಿ ಶಿವಾನಂದರ ಆಶ್ರಯಕ್ಕೆ ಬಂದು ಧ್ಯಾನ ಮಾರ್ಗವನ್ನು ಹಿಡಿದರು. ಬ್ರಹ್ಮಚರ್ಯದ ವ್ರತಧಾರಣೆ ಮಾಡಿದರು. ಸ್ವಾಮಿ ಶಿವಾನಂದರ ಮಾರ್ಗದರ್ಶನದಲ್ಲಿ ಬರೋಡಾದ ಪ್ರೊ.ರಾಜರತ್ನ ಮಾಣಿಕ್‌ರಾಯ್‌ರವರ ಶಿಷ್ಯತ್ವ ವಹಿಸಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿಯನ್ನು ಪಡೆದು ಬಿ.ಪಿ.ಇ ಎನ್ನುವ ಪದವಿಯನ್ನು ಗಳಿಸಿದರು. ತದನಂತರ ಆಗ ಭಾರತಕ್ಕೆ ಸೇರಿದ ಈಗ ಪಾಕಿಸ್ತಾನದಲ್ಲಿರುವ ಕರಾಚಿಗೆ ಹೋಗಿ ಅಂದಿನ ಅತ್ಯಂತ ಪ್ರಸಿದ್ಧ ಆಯುರ್ವೇದ ತಜ್ಞರಾದ ಪಂಡಿತ್ ಲಕ್ಷ್ಮಣಬಾಬಾರವರಲ್ಲಿ ಆಯುರ್ವೇದ ವೈದ್ಯ ವಿದ್ಯೆಯ ಜ್ಞಾನವನ್ನು ಗಳಿಸಿದರು. ಹೀಗೆ ವೈದ್ಯ ಮತ್ತು ಯೋಗ ವಿದ್ಯೆಗಳ ಸಂಚಯನ ಮಾಡಿಕೊಂಡ ಈ ತರುಣರು ಗಾಂಧೀಜಿಯವರ ಪ್ರಭಾವಕ್ಕೆ ಒಳಪಟ್ಟು ಗ್ರಾಮೀಣ ಭಾರತದ ಸೇವೆಗಾಗಿ ತಮ್ಮನ್ನು ತಾವು ಕೊಟ್ಟುಕೊಂಡರು. ಕರ್ನಾಟಕಕ್ಕೆ ಬಂದು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗಾಗಿ ೪೧ ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾ, ಜೀವನ ಮೌಲ್ಯಗಳನ್ನು ಜಾಗತೃಗೊಳಿಸುತ್ತಾ ಊರುರು ಸುತ್ತುತ್ತಿದ್ದರು. ಅಂತಹ ಸುತ್ತಾಟದ ಅಂಗವಾಗಿಯೇ ಅವರು ೧೯೪೨ ರ ಡಿಸೆಂಬರ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಕುಗ್ರಾಮಕ್ಕೆ ಬಂದರು. ಮಲ್ಲಾಡಿಹಳ್ಳಿಯ ಶಿಬಿರ ಮುಗಿದ ಅನಂತರದಲ್ಲಿಯೇ ಊರಲ್ಲಿ ಕಾಲರಾ ಮಾರಿಯ ಹಾವಳಿ ಆರಂಭವಾಯಿತು. ಎಲ್ಲ ಮನೆಗಳನ್ನು ಹೊಕ್ಕ ಕಾಲರಾ ಜನರಲ್ಲಿ ಸಾವಿನ ಭೀತಿಯನ್ನು ಬಿತ್ತಿತು.ಮುಂದಿನ ಊರಿಗೆ ಹೋಗದೇ ಇನ್ನೂ ಮಲ್ಲಾಡಿಹಳ್ಳಿಯಲ್ಲಿಯೇ ಉಳಿದಿದ್ದ ಬಾ.ರಾಘವೇಂದ್ರ ರಾವ್ ಅವರು ಸಾವಿನ ಜಾತ್ರೆಯ ವಿರುದ್ಧ ಯುದ್ಧ ಹೂಡಿದರು.ಮನೆ ಮನೆಗೆ ಹೋಗಿ ಜೌಷಧಿ ನೀಡಿ ರೋಗಿಗಳನ್ನು ಬದುಕಿಸಿದರು. ಶುಚಿತ್ವದ ಪಾಠ ಹೇಳಿಕೊಟ್ಟರು. ಜೀವನ ವಿಧಾನ, ಬಿಸಿಯಾದ, ತಾಜಾ ಆಹಾರ ಸೇವನೆಯ ಮಹತ್ವ,ಪರಿಸರದ ಸ್ವಚ್ಛತೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟರು.ಅವರ ಈ ನಿರ್ಮಲ ಅಂತಃಕರಣದ ಸೇವೆಯಿಂದ ಜನರೆಲ್ಲಾ ಅವರಲ್ಲಿ ಗೌರವ ಭಾವ ತಾಳಿದರು, ಪ್ರೀತಿ ತೋರಿದರು. ಭಕ್ತಿ ಪ್ರದರ್ಶಿಸಿದರು, ಅವರನ್ನು ಈ ಊರಿನಲ್ಲೇ ಶಾಶ್ವತವಾಗಿ ಉಳಿಯುವಂತೆ ಪ್ರೀತಿ ಪೂರ್ವಕವಾಗಿ ಒತ್ತಾಯಿಸಿದರು.ಪ್ರೀತಿಪೂರಿತವಾದ ಈ ಒತ್ತಾಯಕ್ಕೆ ಮಣಿಯದೇ ಇರಲು ಆ ಹೃದಯಕ್ಕೆ ಸಾಧ್ಯವಾಗಲಿಲ್ಲ.ಕೊನೆಗೆ ಜನರ ಒತ್ತಾಯ ಗೆದ್ದಿತು.

ಆಶ್ರಮದ ಶುಭಾರಂಭ

ಊರೂರು ಅಲೆಯುತ್ತಾ ಯೋಗ ಶಿಬಿರಗಳನ್ನು ನಡೆಸುತ್ತಾ ನಿಂತಲ್ಲಿ ನಿಲ್ಲದೆ ತಿರುಗುತ್ತಿದ್ದ ಇವರನ್ನು ಇದುವರೆಗೆ ಜನರು ‘ವ್ಯಾಯಮ ಮೇಷ್ಟ್ರು’ ಎಂದು ಕರೆಯುತ್ತಿದ್ದರು.ಮಲ್ಲಾಡಿಹಳ್ಳಿಯ ಮತ್ತು ಸುತ್ತಮುತ್ತಲಿನ ಜನತೆ ಇವರ ವ್ಯಕ್ತಿತ್ವವನ್ನು ಮನಗಂಡು ಇವರನ್ನು “ಸ್ವಾಮೀಜಿ” ಎಂದು ಕರೆದರು.ಅಲ್ಲಿಂದ ಮುಂದೆ ಇವರು ‘ಶ್ರೀ ರಾಘವೇಂದ್ರ ಸ್ವಾಮೀಜಿ’ಯಾದರು. ಊರಿನವರು ಪ್ರೀತಿಯಿಂದ ನೀಡಿದ ಒಂದು ನಿವೇಶನ ಮತ್ತು ಸಂಕಜ್ಜಿ ಎಂಬ ಹಿರಿಯಳು ನೀಡಿದ ಒಂದು ಕಾಣಿಕೆಯ ಗಂಟು ಇವುಗಳನ್ನು ಇಟ್ಟುಕೊಂಡು ಆಶ್ರಮದ ಶುಭಾರಂಭ ಮಾಡಿದರು. ಅದು, ೧೯೪೩ನೇ ಇಸವಿ ಮಹಾಶಿವರಾತ್ರಿಯ ಶುಭದಿನ.ಅಂದು ‘ಅನಾಥಸೇವಾಶ್ರಮ’ ರೂಪ ತಾಳಿತು.ಅಸಂಖ್ಯಾತ ಜನರ ಬದುಕಿಗೆ ಅಧಾರವಾಯಿತು. “ಸೇವೆ -ಸೇವೆ-ಸೇವೆ” ಎನ್ನುವ ರಾಘವೇಂದ್ರ ಸ್ವಾಮೀಜಿಯವರ ಮೂಲ ಮಂತ್ರದ ಸಾಕ್ಷಾತ್ಕಾರವಾಯಿತು. ಇವರ ವ್ಯಕ್ತಿತ್ವದಿಂದ ಪ್ರಭಾವಿತರಾದ, ಹೊಳಲ್ಕೆರೆಯ ಸೂರ್ಯನಾರಾಯಣರಾವ್ ಎನ್ನುವವರು, ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಯಲ್ಲಿದ್ದವರು ಇವರ ಶಿಷ್ಯರಾದರು. ಗುರುವಿನಿಂದ ‘ಸೂರ್‌ದಾಸ್‌ಜಿ’ ಎಂದು ನಾಮಕರಣಗೊಂಡು ಗುರುವಿನ ಜೊತೆಜೊತೆಗೇ ಹೆಗಲು ಕೊಟ್ಟು ದುಡಿಯಲು ನಿಂತರು. ಇಬ್ಬರೂ ಕೂಡಿ ಆಶ್ರಮವನ್ನು ಬೆಳಸತೊಡಗಿದರು.

ಆಶ್ರಮದ ಬೆಳವಣಿಗೆ

ಹೀಗೆ, ಜನರಿಂದ ‘ಸ್ವಾಮೀಜಿ’ ಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ. ಗುರು ಶಿಷ್ಯರಿಬ್ಬರೂ ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯ, ಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ.ಸೇವೆಗಾಗಿನ ಬದುಕು. ಇವರ ಅಂತಃಕರಣ ಪೂರಿತ ಸೇವಾಕೈಂಕರ್ಯದಿಂದ ಪ್ರಭಾವಿತಗೊಂಡ ಜನ ಉದಾರವಾಗಿ ನೀಡಿದರು. ಜಾತಿ, ಮತ, ಪಂಥಗಳ ಹಂಗಿಲ್ಲದೆ ಇವರು ‘ಜೋಳಿಗೆ’ ಮಾಡಿದ ಪವಾಡ ಅಸಾದೃಶ. ಹೇಳಬೇಕೆಂದರೆ ಇದು ಜೋಳಿಗೆ ಮಾಡಿದ ಪವಾಡ ! ಜನ ಕೊಟ್ಟದ್ದು ಗುಣಿತಗೊಂಡು ಸಮಾಜೋದ್ಧಾರಕ್ಕೆ ಲಭ್ಯವಾಗುತ್ತಾ ಅನಾಥಸೇವಾಶ್ರಮವು ಕಾಮಧೇನುವಾಗಿ ಬೆಳೆಯಿತು. ೧೯೪೩ರಲ್ಲಿ ಆಶ್ರಮ ಪ್ರಾರಂಭವಾದಾಗಿನಿಂದ ಯೋಗ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸೆ ಜೊತೆ ಜೊತೆಗೇ ಸಾಗುತ್ತ ಬಂದವು. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸುಲಭವಾಗಿ ಶಿಕ್ಷಣಾನುಕೂಲ ಒದಗಿಸುವುದಕ್ಕಾಗಿ ೧೯೫೦ ರಲ್ಲಿ ರಾಷ್ಟ್ರೀಯ ವಿವಿಧೋದ್ಧೇಶ ಪ್ರೌಢಶಾಲೆಯನ್ನು ಆರಂಭಿಸಿದರು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿಗೃಹ ವ್ಯವಸ್ಥೆ ಹೊಂದಿದ್ದ ಈ ಶಾಲೆಯಲ್ಲಿ ಈ ಊರಿನ, ಸುತ್ತಮುತ್ತಲ ಗ್ರಾಮಗಳ ಮಕ್ಕಳಲ್ಲದೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದಲೂ ವಿದ್ಯಾರ್ಥಿಗಳು ಬಂದು ಕಲಿಯಲಾರಂಭಿಸಿದರು. ೧೯೫೮ ರಲ್ಲಿ ಸರ್ವಸೇವಾ ಬೋಧಕ ಶಿಕ್ಷಣಾಲಯ-ಎಂಬ ಶಿಕ್ಷಕರ ತರಬೇತಿ ಸಂಸ್ಥೆ ಆರಂಭವಾಯಿತು. ಇದರ ಉದ್ದೇಶ ಯುವ ಜನತೆಯಲ್ಲಿ ಜೀವನ ಮೌಲ್ಯಗಳನ್ನು ಬೋಧಿಸಲು ಅರ್ಹರಾದ ಶಿಕ್ಷಕರನ್ನು ಸಿದ್ಧಪಡಿಸುವುದು. ೧೯೬೯ ರಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಒಳಗೊಂಡ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಿದರು. ಇದರ ಜೊತೆಗೆ ೧೯೭೯ ರಲ್ಲಿ ವೃತ್ತಿಶಿಕ್ಷಣ ವಿಭಾಗವೂ ಆರಂಭವಾಯಿತು. ಸ್ವ ಉದ್ಯೋಗಕ್ಕೆ ದಾರಿಯಾಗಿ ಬೆಳೆದು ನೂರಾರು, ಸಾವಿರಾರು ಜೀವಿಗಳ ಜೀವನಕ್ಕೆ ಆಧಾರ ಒದಗಿಸಿತು. ೧೯೬೮ ರಲ್ಲಿ ಆಶ್ರಮದ ರಜತ ಮಹೋತ್ಸವದ ನೆನಪಿಗಾಗಿ ರಜತ ಮಹೋತ್ಸವ ದೈಹಿಕ ಶಿಕ್ಷಣ ಸ್ವಾಮೀಜಿವವರ ಶತಮಾನೋತ್ಸವದ ನೆನಪಾಗಿ ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಠವಾದ ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು. ಆಶ್ರಮದ ಆವರಣದಲ್ಲಿ ವಿವಿಧ ಬಗೆಯ ಸಸ್ಯಮೂಲಿಕೆಗಳ ಔಷಧಿವನಗಳನ್ನು ಕೈಯಾರೆ ಬೆಳೆಸಿದರು. ಜನರಿಗೆ ಶಿಕ್ಷಣ, ಆರೋಗ್ಯ,ಸಂಸ್ಕೃತಿ, ಕಲೆ-ಹೀಗೆ ಹತ್ತು ಹಲವು ಅಂಶಗಳ ಬಗ್ಗೆ ಪರಿಜ್ಞಾನ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಶ್ರಮವನ್ನು ಬೆಳೆಸುತ್ತಾ ಹೋದರು. ಹೀಗೆ, ಆಶ್ರಮದ ಆವರಣದಲ್ಲಿ ಸ್ಥಾಪಿತವಾದ ಸಂಸ್ಥೆಗಳಲ್ಲದೆ ಈ ವಿಶ್ವಸ್ತ ಸಂಸ್ಥೆಯ ಆಶ್ರಯದಲ್ಲಿ ಉಳಿದೆಡೆಗಳಲ್ಲಿಯೂ ಶಾಲಾ ಕಾಲೇಜುಗಳು ಸ್ಥಾಪನೆಗೊಂಡವು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿಯಲ್ಲಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಹಾಗೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶೆಟ್ಟಿಹಳ್ಳಿಗಳಲ್ಲಿ ಪ್ರೌಢಶಾಲೆಗಳಿವೆ. ನಂತರದಲ್ಲಿ ಮೈಸೂರಿನ ಕುವೆಂಪು ನಗರದಲ್ಲಿ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಸ್ವತಂತ್ರ ವಿಜ್ಞಾನ ಪಿ.ಯು.ಕಾಲೇಜು ಹಾಗೂ ಸಮೀರ ಶಿಕ್ಷಕರ ತರಬೇತಿ ಕೇಂದ್ರಗಳು ಸ್ಥಾಪಿತವಾಗಿ ಆಶ್ರಮದ ಮೂಲೋದ್ದೇಶವನ್ನು ನೆರೆವೇರಿಸುತ್ತಿವೆ.

ಆಶ್ರಮದ ಚಟುವಟಿಕೆಗಳು

ಯೋಗ ಶಿಕ್ಷಣಕ್ಕೆ ಆದ್ಯತೆ ಕೊಟ್ಟಿದ್ದ ಸ್ವಾಮೀಜಿಯವರು ಆರಂಭದಿಂದಲೂ ಪ್ರತಿ ವರ್ಷ ಆಕ್ಟೋಬರ್ ತಿಂಗಳ ೪ ರಿಂದ ೨೫ರವರೆಗೆ ೨೧ ದಿನಗಳ ಯೋಗ ಶಿಬಿರವನ್ನು ನಡೆಸುತ್ತಿದ್ದರು. ಪಾತಂಜಲ ಮೂಲಯೋಗ ಶಿಕ್ಷಣ ಶಿಬಿರವೆಂಬ ಹೆಸರಿನ ಇದರಿಂದ ದೇಶದ ನಾನಾ ಭಾಗಗಳಿಂದ ಬಂದ ಸಾವಿರಾರು ಆಸಕ್ತರು ಲಾಭ ಪಡೆದರು. ಸ್ವಾಮೀಜಿಯವರು ಬೇರೆ ಬೇರೆ ಕಡೆಗಳಲ್ಲಿ ಯೋಗ ಪ್ರದರ್ಶನ ನೀಡುತ್ತಿದ್ದರು. ಆಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಮಾರುತಿಯ ಪ್ರಾರ್ಥನೆಯೊಂದಿಗೆ ಸೂರ್ಯನಮಸ್ಕಾರ, ಗುರುನಮಸ್ಕಾರ ಮತ್ತು ಅಗತ್ಯವಾದ ಕೆಲವು ಯೋಗಾಸನಗಳ ಅಭ್ಯಾಸ ನೀಡಲಾಗುತ್ತದೆ. ಸಾಯಂಕಾಲ ಭಜನೆ. ಸ್ವಾಮೀಜಿಯವರು ಯೋಗದ ನಂತರದ ಸ್ಥಾನವನ್ನು ಆಯುರ್ವೇದ ಚಿಕಿತ್ಸೆಗೆ ನೀಡಿದ್ದರು.’ನಾಡೀ’ವಿದ್ಯೆಯಲ್ಲಿ ವಿಶೇಷ ಪರಿಣಿತರಾದ ಇವರಲ್ಲಿ ಔಷಧಿ ಪಡೆಯಲು ದೂರದ ಊರುಗಳಿಂದ ಜನ ಬರುತ್ತಿದ್ದರು.ಇವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿ ದೀರ್ಘಾವಧಿ ಕಾಯಿಲೆಗಳಾದ ಅಸ್ತಮಾ, ಚರ್ಮರೋಗಗಳು, ಮುಂತಾದವುಗಳನ್ನು ಗುಣಪಡಿಸುತ್ತಿದ್ದರು.ಔಷಧಿ ತಯಾರಿಕಾ ತಜ್ಞರಾದ ಇವರು ಆಸ್ಪತ್ರೆಗೆ ಸೇರಿದಂತೆ ಒಂದು ಸಾಂಪ್ರದಾಯಿಕ ಔಷಧ ತಯಾರಿಕಾ ಘಟಕವನ್ನು ಪ್ರಾರಂಭಿಸಿದರು. ಔಷಧಿ ಮೂಲಿಕಾ ವನವನ್ನು ಮುತುವರ್ಜಿಯಿಂದ ಬೆಳೆಸಿದರು. ಅನವತರವೂ ಜನ ಸೇವೆಯಲ್ಲಿ ನಿರತರಾದ ಇವರನ್ನು ಜನರಷ್ಟೇ ಅಲ್ಲ-ಸರ್ಕಾರ,ಸಂಘ ಸಂಸ್ಥೆಗಳೂ ಗುರುತಿಸಿದವು. ಇವರ ಸಮಯೋಚಿತವಾದ,ಪ್ರಾಮಾಣಿಕ,ಹಾಗೂ ನಿಷ್ಠಾಂತ ವೈದ್ಯಕೀಯ ಚಿಕಿತ್ಸೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರವು ಇವರಿಗೆ “ಅಭಿನವ ಧನ್ವಂತರಿ” ಪ್ರಶಸ್ತಿಯನ್ನು ೬ ಸಲ ನೀಡಿ ಗೌರವಿಸಿತು. ರಾಜ್ಯ ಸರ್ಕಾರವು ಇವರನ್ನು ರಾಜ್ಯ ಯೋಗ ಶಿಕ್ಷಣ ಮಂಡಳಿಯ ಗೌರವ ನಿರ್ದೇಶಕರೆಂದು ನೇಮಿಸಿ ಗೌರವಿಸಿತು. ಈ ಗೌರವವಲ್ಲದೆ ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಯೋಗ ಶಿಕ್ಷಣಕ್ಕೆ ಪಠ್ಯವಸ್ತು ರಚಿಸಿಕೊಡಲು ಕೇಳಿಕೊಂಡಿತು. ಹೀಗೆ ಸ್ವಾಮೀಜಿಯವರು ತಮ್ಮ ಸೇವಾತತ್ಪರತೆಯಿಂದ ಜನರ ಹೃದಯಗಳಲ್ಲಿ ಸ್ಥಿರವಾಗಿ ನಿಂತರು.

ನಂತರದಲ್ಲಿ

ಸ್ವಾಮೀಜಿಯವರ ನೇತೃತ್ವದಲ್ಲಿ ಸುಮಾರು ೮೦ ಎಕರೆಗಳಷ್ಟು ವಿಸ್ತಾರವಾಗಿ ವಿವಿಧ ರೀತಿಯಲ್ಲಿ ಬೆಳೆದು ನಿಂತ ಮಲ್ಲಾಡಿಹಳ್ಳಿಯಲ್ಲಿಯ ಅನಾಥಸೇವಾಶ್ರಮದ ಆವರಣ ಮತ್ತು ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ,ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ,ಶಿಕಾರಿಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಮತ್ತು ಮೈಸೂರಿನ ಕುವೆಂಪು ನಗರದಲ್ಲಿನ ಆವರಣ ಇವೆಲ್ಲವೂ ಸ್ವಾಮೀಜಿತವರು ಬ್ರಹ್ಮೀಭೂತರಾದ ನಂತರದಲ್ಲಿ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘ ಶರಣರ ನೇತೃತ್ವದಲ್ಲಿ,ಅವರ ದಿವ್ಯ ಅಧ್ಯಕ್ಷತೆಯಲ್ಲಿ ಮುಂದುವರಿಯುತ್ತಿದೆ. ಅರಸು ಮನೆತನಕ್ಕೆ ಗುರುಪೀಠವಾದ ಬೃಹನ್ಮಠ ಪರಂಪರೆಯಲ್ಲಿ ಬಂದಿರುವ ಶ್ರೀ ಮುರುಘಶರಣರೂ ಸಹಾ ಶ್ರೀ ರಾಘವೇಂದ್ರ ಸ್ವಾಮೀಜಿಯವರಂತೆಯೇ ವಿಶಿಷ್ಠ ವ್ಯಕ್ತಿತ್ವ. ಶ್ರೀ ಶರಣರು ಸಮಾಜದ ಸುಧಾರಣೆ ಹಾಗೂ ಪ್ರತಿಯೊಬ್ಬನ ಹೃದಯದಲ್ಲಿ ವೈಚಾರಿಕತೆಯ ಕಿಡಿಯನ್ನು ಉದ್ದೀಪಿಸಲು, ಜಾತಿ ಮತಗಳ ಬೇಧವಿಲ್ಲದ ಸೌಹರ್ದತೆಯ ಸಮಾಜವನ್ನು ನಿರ್ಮಿಸಲು ದುಡಿಯುತ್ತಿರುವ ವಿಶಿಷ್ಠ ಚೇತನರು, ಇವರ ದೃಷ್ಠಿಯಲ್ಲಿ ಸಮಾಜದ ಕ್ಷೇಮವೆಂದರೆ ಸಾಮಾಜಿಕ ನೈತಿಕತೆ ಮತ್ತು ವ್ಯಕ್ತಿತ್ವದ ವಿಕಸನ. ಹೀಗೆ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಶಿವಮೂರ್ತಿ ಮುರುಘ ಶರಣರ ಸೇವಾಕಾಂಕ್ಷೆಗಳ ಮೂಲ ಬೇರುಗಳು ಒಂದೇ ಆಗಿದ್ದು ರಾಘವೇಂದ್ರಸ್ವಾಮೀಜಿಯವರು ಕಂಡ ಕನಸುಗಳು ಇವರ ನೇತೃತ್ವದಲ್ಲಿ ಕವಲೊಡೆಯುತ್ತಿವೆ.

ಪ್ರಸುತ್ತ ಚಟುವಟಿಕೆಗಳು

ಬ್ರಹ್ಮೀಭೂತ ಶ್ರೀಶ್ರೀ ಗಳ ಧ್ಯೇಯೋಧ್ಯೇಶಗಳ ಅಡಿಗಲ್ಲಿನ ಮೇಲೆಯೇ ಈಗಲೂ ಆಶ್ರಮದ ಚಟುವಟಿಕೆಗಳೂ ಕಾರ್ಯಕ್ರಮಗಳೂ ನಡೆಯುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಮೀಜಿಯವರ ಸೇವೆಯನ್ನು ಮುಂದುವರೆಸುವಂತೆ ಹೊಸ ಶೈಕ್ಷಣಿಕ ಸಂಸ್ಥೆಗಳು ರೂಪಗೊಳ್ಳುತ್ತಿವೆ. ೧೯೯೮-೯೯ ರಲ್ಲಿ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಪ್ರಾಥಮಿಕ ಶಾಲೆ, ೨೦೦೪ ರಲ್ಲಿ ಶ್ರೀ ರಾಘವೇಂದ್ರ ಕೈಗಾರಿಕಾ ತರಬೇತಿ ಸಂಸ್ಥೆ,ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ಶ್ರೀ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಅದಕ್ಕೆ ಹೊಂದಿಕೊಂಡಂತೆ ಆಸ್ಪತ್ರೆ,ಔಷಧಿ ತಯಾರಿಕಾ ಘಟಕಗಳು ಆರಂಭವಾಗಿ ಮುನ್ನೆಡೆದಿವೆ.ಆಸ್ಪತ್ರೆಯು ಪುರುಷರಿಗೆ, ಸ್ರ್ತೀಯರಿಗೆ ಪ್ರತ್ಯೇಕವಾಗಿ ೧೦೦ ಹಾಸಿಗೆಗಳನ್ನು ಹೊಂದಿದ್ದು ಪಂಚಕರ್ಮ ಚಿಕಿತ್ಸಾ ಘಟಕವನ್ನೂ ಒಳಗೊಂಡಿದೆ. ೨೦೧೦ರ ಆಗಸ್ಟ್ ತಿಂಗಳಲ್ಲಿ ಆಶ್ರಮದಲ್ಲಿ ೪೦ ಕಂಪ್ಯೂಟರ್‌ಗಳು ಇರುವ ಸುಸಜ್ಜಿತ ಶ್ರೀ ರಾಘವೇಂದ್ರ ಕಂಪ್ಯೂಟರ್ ತರಬೇತಿ ಕೇಂದ್ರ ಮತ್ತು ಅತ್ಯುತ್ತಮ ಸಂಗೀತ ಶಿಕ್ಷಕರು ವಾದ್ಯವಾದನಗಳಿರುವ ಸಮರ್ಥವಾದ ಶ್ರೀ ಸೂರುದಾಸ್‌ಜಿ ಸಂಗೀತ ವಿದ್ಯಾಲಯಗಳು ಸ್ಥಾಪನೆಗೊಂಡಿದ್ದು ಆಶ್ರಮದ ವಿದ್ಯಾರ್ಥಿಗಳು ಇವುಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆಶ್ರಮದ ಈಗಿನ ಆಡಳಿತ ಮಂಡಳಿಯು ಸ್ವಾಮೀಜಿಯವರ ಸೇವೆಯ ಆದರ್ಶವನ್ನು ಇಟ್ಟುಕೊಂಡು ಈ ಹಿಂದುಳಿದ ಹಳ್ಳಿಗಾಡಿನ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಪಟ್ಟಣಗಳಲ್ಲಿ ಲಭ್ಯವಾಗುವ ಎಲ್ಲ ಶೈಕ್ಷಣಿಕ ಅನುಕೂಲತೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ. ಯೋಗ ತರಬೇತಿ ಶಿಬಿರಗಳು, ಭಜನೆ, ಸೂರ್ಯನಮಸ್ಕಾರ ಇತ್ಯಾದಿ ಚಟುವಟಿಕೆಗಳು ಹಿಂದಿನಂತೆಯೇ ಮುಂದುವರಿದಿದ್ದು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ವಿಶೇಷ ಯೋಗ ತರಬೇತಿ ತರಗತಿಗಳು ನಿತ್ಯ ನಡೆಯುತ್ತಿವೆ. ಆ ವಿದ್ಯಾರ್ಥಿಗಳು ರಾಜ್ಯ,ರಾಷ್ರ್ಷಮಟ್ಟಗಳಲ್ಲಿ ಸ್ಪರ್ಧಿಸಿ ಆಶ್ರಮಕ್ಕೆ ಕೀರ್ತಿ ತರುತ್ತಿದ್ದಾರೆ.

ಗುರುವಂದನೆ

ಈ ಭಾಗದ ಜನಮನದಲ್ಲಿದ್ದ ಬಡತನ,ಅನಕ್ಷರತೆ,ನಿರ್ಲಕ್ಷಗಳನ್ನು ತೊಡೆದು ಹಾಕುವಲ್ಲಿ ಯಾವುದೇ ಗುರು ಮಾಡದಿದ್ದಷ್ಟು ಕೆಲಸಗಳನ್ನು ಶ್ರೀ ರಾಘವೇಂದ್ರ ಸ್ವಾಮೀಜಿಯವರು ಕೈಗೊಂಡರು. ಹೀಗಾಗಿ ಇಲ್ಲಿನ ಜನ ಅವರನ್ನು ತಮ್ಮ ನಿಜವಾದ ಗುರುಗಳೆಂದು ಸ್ವೀಕರಿಸಿ ಕೃತಜ್ಞತಾ ಪೂರ್ವಕವಾಗಿ ಪ್ರತಿವರ್ಷವೂ ಸೆಷೆಂಬರ್ ೨೧ ಮತ್ತು ೨೨ ನೇ ದಿನಾಂಕಗಳಲ್ಲಿ ‘ಗುರುವಂದನೆ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ತಮ್ಮ ಗೌರವವನ್ನು ಸಲ್ಲಿಸುತ್ತಿದ್ದಾರೆ.

ಕನ್ನಡ ರಾಜ್ಯೋತ್ಸವ

ಈ ಕಾರ್ಯಕ್ರಮವು ಶ್ರದ್ಧೆ, ಭಕ್ತಿ ಮತ್ತು ಉತ್ಸಾಹಗಳಿಂದ ಆಚರಿಸಲ್ಪಡುತ್ತಿದೆ.ಪ್ರತಿವರ್ಷ ನವೆಂಬರ್ ೧೪ ರಂದು ಈ ಕಾರ್ಯಕ್ರಮ ನಡೆಯುತ್ತದೆ. ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳಿದ ಕೂಡಿದ ಮೆರವಣಿಗೆಯು ಬೆಳಗಿನಲ್ಲಿ ಮನಸೆಳೆದರೆ ನಂತರದ ಸಭಾ ಕಾರ್ಯಕ್ರಮದಲ್ಲಿ ಸಾಹಿತ್ಯಲೋಕದ ವಿಶೇಷ ಚಿಂತಕರು, ಗಣ್ಯವ್ಯಕ್ತಿಗಳು, ಸಾಹಿತಿಗಳು, ಭಾಷಾ ತಜ್ಞರು ಮುಂತಾದವರಿಂದ ಉಪನ್ಯಾಸಗಳು, ಪ್ರಬಂಧ ಮಂಡನೆಗಳು ನಡೆಯುತ್ತವೆ. ಇದೊಂದು ವಿಶಿಷ್ಟಪೂರ್ಣ ಆಚರಣೆಯಾಗಿದೆ.

ತಿರುಕನೂರಿನಲ್ಲಿ ರಂಗದಾಸೋಹ (ತಿರುಕರಂಗೋತ್ಸವ)

ಸ್ವಾಮೀಜಿಯವರಿಗೆ ಅತ್ಯಂತ ಪ್ರಿಯವಾದ ಮತ್ತೊಂದು ಅಂಶವೆಂದರೆ ರಂಗಕಲೆ.ಸ್ವತಃ ಅಭಿನಯ ಆಸಕ್ತಿಯುಳ್ಳ ಅವರು ಉತ್ತಮ ಬರಹಗಾರರೂ ಆಗಿದ್ದರು, ತಾವೇ ನಾಟಕಗಳನ್ನು ರಚಿಸಿ, ತಾವೂ ಅಭಿನಯಿಸಿ, ಇತರರನ್ನೂ ಅಭಿನಯಿಸುವಂತೆ ಮಾಡುತ್ತಿದ್ದರು.ಅವರ ಪುಣ್ಯಸ್ಮರಣೆಯ ನಿಮಿತ್ತ ಪ್ರತಿವರ್ಷ ಜನವರಿ ೯ ರಿಂದ ೧೩ ರವರೆಗೆ ‘ತಿರುಕನೂರಿನಲ್ಲಿ ರಂಗದಾಸೋಹ’ ಎಂಬ ಹೆಸರಿನಲ್ಲಿ ನಾಟಕೋತ್ಸವ ನಡೆಸಲಾಗುತ್ತಿದೆ. ಉತ್ತಮ ನಾಟಕಗಳನ್ನು ಆಧುನಿಕ ರಂಗ ಸಜ್ಜಿಕೆಗಳೊಂದಿಗೆ, ಶ್ರೇಷ್ಠ ನಿರ್ದೇಶಕರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಪ್ರದರ್ಶಿಸಲಾಗುತ್ತಿದೆ. ಇದನ್ನು ನೋಡಲು ಹತ್ತಾರು ಸಾವಿರ ಪ್ರೇಕ್ಷಕರು ಸೇರುತ್ತಾರೆ. ಉತ್ಸಾಹದಿಂದ ಪಾಲ್ಗೊಂಡು ಹರ್ಷಿಸುತ್ತಾರೆ.

ಆಶ್ರಮದ ಮತ್ತಷ್ಟು ಬೆಳವಣಿಗೆಗಳು

ಪ್ರಸುತ್ತದಲ್ಲಿ ವಸತಿಗೃಹಗಳ ನವೀಕರಣ, ಶಾಲಾ ಕಾಲೇಜು ಕಟ್ಟಡಗಳ ನವೀಕರಣ. ಆಶ್ರಮ ನಿವಾಸಿಗಳ ವಸತಿಗೃಹಗಳ ದುರಸ್ತಿ-ನವೀಕರಣ ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಿಕ್ಞಣ ಮಹಾವಿದ್ಯಾಲಯದ ಹೊಸ ಕಟ್ಟಡದ ಸುಧಾರಿಸಲಾಗುತ್ತಿದೆ. ಜೊತೆಗೆ ವಿದ್ಯುಚ್ಛಕ್ತಿಯ ಕೊರೆತೆಯಿಂದ ಓದುವ ಮಕ್ಕಳಿಗೆ ತೊಂದರೆಯಾಗಬಾರದೆಂದು ಜನರೇಟರ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದರ ಜೊತೆಗೆ ಇನ್ನಷ್ಟು ವಸತಿಗೃಹಗಳ ನಿರ್ಮಾಣ ಆಗಬೇಕಾಗಿದೆ. ಈ ಎಲ್ಲಾ ಕೆಲಸಗಳಲ್ಲಿ ಆಶ್ರಮ ಸಕ್ರಿಯವಾಗಿ ತೊಡಗಿಕೊಂಡಿದೆ.

ಬಹುಮುಖ್ಯವಾಗಿ

ಸ್ವಾಮೀಜಿಯವರ ದಿವ್ಯಚೇತನಗಳಿಗೆ ನಮ್ಮ ಕೃತಜ್ಞತೆಯ ಕುರುಹಾಗಿ ‘’ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ” ಸ್ಮಾರಕವೊಂದನ್ನು ಕಟ್ಟುವ, ೧ ಕೋಟಿ ರೂಪಾಯಿಗಳಷ್ಟು ವೆಚ್ಚದ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದು ಆಗಬೇಕಾಗಿರುವುದು ಅವರ ಅಭಿಮಾನಿಗಳು, ಶಿಷ್ಯರು, ಸಹೃದಯ ದಾನಿಗಳ, ಉದಾರ ಬುದ್ಧಿಯುಳ್ಳವರ ದಾನದಿಂದ. ಇದನ್ನೇ ನಂಬಿ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕನಸನ್ನು ಆದಷ್ಟು ಶೀಘ್ರದಲ್ಲಿ ನನಸಾಗಿಸುವ ಹಂಬಲವಿದೆ. ಹಿಂದಿನಿಂದ ನಡೆದು ಬಂದಿರುವ ಪದ್ಧತಿಯಂತೆ ಆಶ್ರಮಕ್ಕೆ ದಾನಿಗಳು ಮತ್ತು ಅಭಿಮಾನಿಗಳು ನೀಡುವ ಹಣವನ್ನು ಒಂದಿನಿತೂ ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ. ಪ್ರತಿ ಪೈಸೆಗೂ ನಿಖರವಾದ ವ್ಯವಸ್ಧೆಯಿದೆ. ಅದಕ್ಕಾಗಿ ಹಮ್ಮಿಕೊಂಡಿರುವ ಪ್ರಮುಖವಾದ ೩ ಯೋಜನೆಗಳೆಂದರೆ : ೧. ಮಾತೃಮಂದಿರ : ಸಮಾಜ ಮತ್ತು ಕುಟುಂಬದಿಂದ ಪರಿತ್ಯಕ್ತ್ಯರಾದ ಮತ್ತು ಶೋಷಿತ ಮಹಿಳೆಯರ ಪುನರ್ವಸತಿ ಯೋಜನೆ. ೨. ತಿರುಕರಂಗ ತರಬೇತಿ ಮತ್ತು ಸಂಶೋಧನಾ ಕೇಂದ್ರ : ಸ್ವಾಮೀಜಿಯವರು ರಂಗಚಟುವಟಿಕೆಗಳ ಬಗೆಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅವರು ತಮ್ಮ ಪೂರ್ವಾಶ್ರಮದಲ್ಲಿ ಅಂಬಾಪ್ರಸಾದ ನಾಟಕ ಮಂಡಳಿಯಲ್ಲಿ ಪ್ರಮುಖ ಸೇವೆಯನ್ನು ಸಲ್ಲಿಸಿದವರು. ನಟರಾಗಿ ನಾಟಕಕಾರರಾಗಿ ತಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ವ್ಯಕ್ತಗೊಳಿಸಿದ ಪೂಜ್ಯ ಸ್ವಾಮೀಜಿಯವರಿಗೆ ತಿರುಕರಂಗ ರಂಗತರಬೇತಿ ಮತ್ತು ಸಂಶೋಧನಾ ಕೇಂದ್ರವು ಅತ್ಯುತ್ಕೃಷ್ಟ ಜಂಗಮ ಸ್ಮಾರಕವೆನ್ನಿಸುವುದು. ೩. ಕೇಂದ್ರ ಗ್ರಂಥಾಲಯ : ಅನಾಥಸೇವಾಶ್ರಮವು ಜ್ಞಾನವನ್ನು ನೀಡುವ ಪ್ರಧಾನ ಮಾರ್ಗವಾದ ಮುದ್ರಿತ ಅಕ್ಷರ ಮಾಧ್ಯಮವನ್ನು ಒದಗಿಸುವ ಕೇಂದ್ರವಾಗಿ ಕೆಲಸ ಮಾಡುತ್ತಾ ಜನತೆಗೆ ಜ್ಞಾನದ ಮಾರ್ಗವನ್ನು ತೆರೆಯುವುದು. ಈ ಕೇಂದ್ರ ಗ್ರಂಥಾಲಯವು ಮಲ್ಲಾಡಿಹಳ್ಳಿ ಮತ್ತು ಸುತ್ತಮುತ್ತಲಿನ ಅಧ್ಯಯನಾಸಕ್ತಿ ಹೊಂದಿರುವ ಜನರಿಗೆ ಓದಿನ ಅವಕಾಶವನ್ನು ಒದಗಿಸುತ್ತದೆ. ೪. ಬಡವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ : ಇದನ್ನು ಅರ್ಹ ಬಡ ಹಾಗೂ ಅನಾಥ ಮಕ್ಕಳ ಶೈಕ್ಷಣಿಕ ಸದುಪಯೋಗಗಳಿಗಾಗಿ ಬಳಸಿಕೊಳ್ಳಲಾಗುವುದು. ೫. ರಂಗಕಲೆ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ನಿಧಿ : ಇದನ್ನು ಆಶ್ರಮದಲ್ಲಿ ವರ್ಷವಿಡೀ ನಡೆಯುವ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಹಾಗೂ ವಿಶೇಷವಾಗಿ “ತಿರುಕನೂರಿನಲ್ಲಿ ರಂಗದಾಸೋಹ” ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗುವುದು.