News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ತಿರುಕನೂರಿನಲ್ಲಿ ರಂಗದಾಸೋಹ-11 ನಾಟಕದ ವಿವರಗಳು

Wednesday, January 8th, 2014

ತಿರುಕನೂರಿನಲ್ಲಿ ರಂಗದಾಸೋಹ-11

ನಾಟಕದ ವಿವರಗಳು

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಹಳ್ಳಿಗಳಿಗೆ ಹೋಗಿ ಎಂದು ಕರೆ ಕೊಟ್ಟಾಗ ಹಳ್ಳಿಗಳಿಗೆ ಹೊರಟವರು ಶ್ರೀ ಬಾ.ರಾಘವೇಂದ್ರ. ಹಳ್ಳಿ ಹಳ್ಳಿಗೂ ಹೋಗಿ ಜನರಿಗೆ ವ್ಯಾಯಾಮ ಕಲಿಸಿ ಜನರ ಪಾಲಿಗೆ ವ್ಯಾಯಾಮ ಮೇಷ್ಟ್ರು ಆಗಿ ಪ್ರತಿಹಳ್ಳಿಯಲ್ಲೂ 40 ದಿನಗಳ ಶಿಬಿರ ನಡೆಸಿ ಯುವಕರಿಗೆ ಯೋಗ ಮತ್ತು ದೈಹಿಕ ವ್ಯಾಯಾಮಗಳ ತರಬೇತಿ ನೀಡಿ ಸ್ವಾತಂತ್ರ್ಯ ಚಳುವಳಿಗೆ ತಕ್ಕುದಾದ ಶಿಸ್ತುಬದ್ಧ ಸ್ವಯಂ ಸೇವಕರನ್ನು ಸಿದ್ಧಪಡಿಸುತ್ತಿದ್ದರು.

ಇಂಥದೇ ಒಂದು ಶಿಬಿರ ಕುಗ್ರಾಮವಾದ ಮಲ್ಲಾಡಿಹಳ್ಳಿಯಲ್ಲಿ ನಡೆದಾಗ ರಾಘವೇಂದ್ರರ ವ್ಯಕ್ತಿತ್ವದಿಂದ ಪ್ರಭಾವಿತಳಾದ ಮಲ್ಲಾಡಿಹಳ್ಳಿಯ ಸಂಕಜ್ಜಿ ಎಂಬ ಪುಣ್ಯಾತ್ಮಳು ತನ್ನ ಬಳಿ ಇದ್ದ ಒಂದು ಪುಟ್ಟ ಗಂಟನ್ನು ನೀಡಿ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸ್ಥಾಪನೆಗೆ ಬೀಜ ಊರಿದಳು. 1943ರ ಶಿವರಾತ್ರಿಯಂದು ಆಶ್ರಮ ವಿದ್ಯುಕ್ತವಾಗಿ ಆರಂಭಗೊಂಡಿತು. ಅದಾದ ಮೇಲೆ ನಾಡಿನಾದ್ಯಂತ ಎಲ್ಲ ಜನಾಂಗದವರೂ ಆಶ್ರಮದ ಬೆನ್ನಿಗೆ ನಿಂತರು. ಆಶ್ರಮ ಬೆಳೆದಂತೆ ವ್ಯಾಯಾಮ ಮೇಷ್ಟ್ರು ಬೆಳೆದರು. ಬೆಳೆದು ಸ್ವಾಮೀಜಿ ಎನ್ನುವ ಅನ್ವರ್ಥಕ ಸಾರ್ಥಕ ಹೆಸರನ್ನು ಜನರಿಂದ ಪಡೆದರು.

ಅನಾಥಸೇವಾಶ್ರಮಕ್ಕೆ ಸಂಸ್ಥಾಪಕರಾದ ಶ್ರೀ ರಾಘವೇಂದ್ರ ಸ್ವಾಮೀಜಿಯವರು ತಮಗೆ ತಕ್ಕ ಶಿಷ್ಯನನ್ನು ಆರಿಸಿಕೊಂಡರು. ’ಸೂರುದಾಸ್‌ಜಿ’ ಎಂದು ಅವರನ್ನು ಕರೆದರು. ಶ್ರೀ ಸೂರುದಾಸ್‌ಜಿ ಅವರು ಅನಾಥಸೇವಾಶ್ರಮದ ಕಾರ್ಯದರ್ಶಿಯಾದರು. ಈ ಗುರುಶಿಷ್ಯರ ಜೋಡಿ ಕರ್ನಾಟಕವಲ್ಲದೆ ಇತರೆ ರಾಜ್ಯಗಳಲ್ಲಿಯೂ ಭಿಕ್ಷೆ ಎತ್ತಿ ಆಶ್ರಮವನ್ನು ಕಟ್ಟಿದರು. ಆದ್ದರಿಂದಲೇ ರಾಘವೇಂದ್ರ ಸ್ವಾಮೀಜಿಯವರು ತಿರುಕ ಎನ್ನುವ ಕಾವ್ಯನಾಮವನ್ನು ಆಯ್ಧಕೊಂಡರು. ಸ್ವಾಮೀಜಿ ಮತ್ತು ಸೂರುದಾಸ್‌ಜಿ ಬ್ರಹ್ಮೀಭೂತರಾದ ಮೇಲೆ ಆಶ್ರಮದ ಅಧ್ಯಕ್ಷರಾಗಿ ನಮಗೆ ದೊರೆತವರು ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿವರು. ಬಸವತತ್ವ ಪೂರಿತರಾಗಿರುವ ಇವರು ತಮ್ಮನ್ನು ಸ್ವಾಮೀಜಿ ಎಂದು ಕರೆದುಕೊಳ್ಳದೇ ’ಶರಣರು’ ಎಂದು ಕರೆದುಕೊಳ್ಳುತ್ತಾರೆ. ಇವರ ಸರಳತೆ, ಮಾನವ ಪ್ರೀತಿ, ಪ್ರಗತಿಪರ ಸಾಮಾಜಿಕ ನಿಲುವು ಮತ್ತು ಕಾಳಜಿಗಳು ನಮ್ಮ ಆಶ್ರಮದ ಬಹುಮುಖ್ಯ ದೋರಣೆಯಾದ ಮಾನವಪ್ರೀತಿಗೆ ಬಹುದೊಡ್ಡ ಒತ್ತಾಸೆಯಾಗಿ ಒದಗಿಬಂದಿದೆ.

ರಾಘವೇಂದ್ರ ಸ್ವಾಮೀಜಿಯವರು ನಾಟ್ಯಕಲೆಯ ಬಗೆಗೆ ಅಪಾರ ಪ್ರೀತಿಯುಳ್ಳವರು. ಅಂಬಾಪ್ರಸಾದ ನಾಟಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಅವರು ನಾಟಕಕಾರ ಮತ್ತು ನಟರಾಗಿದ್ದರು. ಅಂತವರ ಕಾವ್ಯನಾಮವನ್ನು ಹೆಸರಾಗಿಟ್ಟುಕೊಂಡು ನಮ್ಮ ಈ ತಿರುಕರಂಗ ಮೂಡಿಬಂದಿದೆ ಸ್ವಾಮೀಜಿಯವರ ನಾಟಕ ಆಸಕ್ತಿಯನ್ನು ಕಾರ್ಯಗತಗೊಳಿಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ.

ತಿರುಕರಂಗ ಆಶ್ರಮದ ವಿದ್ಯಾರ್ಥಿಗಳಿಗೆ ನಾಟಕಕಲೆಯ ತರಬೇತಿ ನೀಡಿ ಅವರಲ್ಲಿ ಅಡಗಿರುವ ಸೃಜನಶೀಲತೆಯನ್ನು ಉದ್ಧೀಪನಗೊಳಿಸುವ ಆಸೆಯನ್ನು ಹೊಂದಿದೆ. ತಿರುಕರಂಗ ಇಡೀ ಪರಿಸರದಲ್ಲಿ ಹರಡಿರುವ ಬಿಗಿತನವನ್ನು ನಿವಾರಿಸಿ ಸಹಜ ಜೀವಂತಿಕೆಯನ್ನು ಪಸರಿಸುವ ಕನಸನ್ನು ಇಟ್ಟುಕೊಂಡಿದೆ. ಇದು ಸಂಪೂರ್ಣವಾಗಿ ಆಶ್ರಮದ ಹಳೆಯ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಸಹಾಯದಿಂದ ನಡೆಯುತ್ತಿರುವ ರಂಗಚಳುವಳಿಯಾಗಿದೆ. ಇಂದು ಈ ಚಳುವಳಿಯ 11ವರ್ಷಕ್ಕೆ ಕಾಲಿಡುತ್ತಿದ್ದೇವೆ. ಪೂಜ್ಯ ಶ್ರೀ ಡಾ.ಶಿವಮೂರ್ತಿ ಶರಣರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಮೀಜಿದ್ವಯರ ಪುಣ್ಯಾರಾಧನೆ ಅಂಗವಾಗಿ ’ತಿರುಕನೂರಿನಲ್ಲಿ ರಂಗದಾಸೋಹ’ ಎಂತೆನ್ನುವ ಕಾರ್ಯಕ್ರಮವು ಇದೇ ಜನವರಿ 9 ರಿಂದ 13ರ ವರೆಗೆ ನಡೆಯಲಿದ್ದು ನಾಡಿನ ಮಠಾಧೀಶರು, ರಾಜಕೀಯ ಧುರೀಣರು, ಸಾಹಿತಿಗಳು, ದಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಮತ್ತು ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ನಾಗರೀಕರು ಭಾಗವಹಿಸಲಿರುವರು. ಪ್ರತಿದಿನ ಬೆಳಿಗ್ಗೆ 6.00 ರಿಂದ 7.30ರವರೆಗೆ ಐದು ದಿನಗಳ ಕಾಲ ಯೋಗ ಶಿಬಿರ ನಡೆಯಲಿದೆ. ಮಧ್ಯಾಹ್ನ 3.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ದಿನಾಂಕ : 9-1-2014ರಂದು ಸಂಜೆ 7.00 ಗಂಟೆಗೆ ಬಿ.ವಿ.ಕಾರಂತ ರಚನೆಯ ಅನಿಲ್ ರೇವೂರು ನಿರ್ದೇಶದಲ್ಲಿ, ತಿರುಕರಂಗ ವೇದಿಕೆಯ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಹಾಗೂ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳಿಂದ ’ನೀಲಿ ಕುದುರೆ’ ನಾಟಕ ಪ್ರದರ್ಶನಗೊಳ್ಳಲಿದೆ. ಎಸ್.ಪಿ.ಮಂಜುನಾಥ್ ಮತ್ತು ತಂಡದವರಿಂದ ಸಂಗೀತವಿದೆ. ದಿನಾಂಕ : 10-1-2014ರ ಶುಕ್ರವಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚನೆಯ ಮಹದೇವ ಹಡಪದ ನಿರ್ದೇಶನದಲ್ಲಿ ಚಿತ್ರದುರ್ಗ ಜಮುರಾ ತಂಡದವರ ’ತಲ್ಲಣಿಸದಿರು ಕಂಡ್ಯ ತಾಳು ಮನವೆ’ ನಾಟಕ ಪ್ರದರ್ಶನಗೊಳ್ಳಲಿದೆ. ಉಮೇಶ್ ಪತ್ತಾರ್ ಮತ್ತು ತಂಡದವರ ಸಂಗೀತವಿದೆ. ದಿನಾಂಕ : 11-1-2014ರ ಶನಿವಾರ ಡಾ.ಶಿವಮೂರ್ತಿ ಮುರುಘಾ ಶರಣರ ರಚನೆಯ ಮಹದೇವ ಹಡಪದ ನಿರ್ದೇಶನದಲ್ಲಿ ಜಮುರಾ ತಂಡದವರಿಂದ ’ಮೌಢ್ಯಬಿಡಿ ನಂಬಿಕೆ ಇಡಿ’  ನಾಟಕ ಪ್ರದರ್ಶನಗೊಳ್ಳಲಿದೆ. ಉಮೇಶ್ ಪತ್ತಾರ್‌ರವರ ಸಂಗೀತವಿದೆ. ದಿನಾಂಕ : 12-1-2014ರ ಭಾನುವಾರ ರಾಜೇಂದ್ರ ಕಾರಂತ್ ರಚನೆಯ ರೇಣುಕಪ್ಪ ಬಿ.ಆರ್. ನಿರ್ದೇಶನದಲ್ಲಿ ಶಿವಮೊಗ್ಗ ಕಲಾರೋಹಣ ತಂಡದವರಿಂದ ’ತಂತಿ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ : 13-1-2014ರ ಸೋಮವಾರ ನಿಸ್ಸಾರ್ ಅಹಮ್ಮದ್ ಕನ್ನಡಕ್ಕೆ ಅನುವಾದಿಸಿದ ಮಾರಪ್ಪ ಬಿ.ಆರ್. ನಿರ್ದೇಶನದಲ್ಲಿ ತಿರುಕರಂಗ ವೇದಿಕೆಯ ಪದವಿಪೂರ್ವ ಕಾಲೇಜು ಮತ್ತು ರಾಘವೇಂದ್ರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಂದ ’ದಿ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನಾಟಕ ಪ್ರದರ್ಶನಗೊಳ್ಳಲಿದೆ. ಎಸ್.ಪಿ.ಮಂಜುನಾಥ್ ಮತ್ತು ತಂಡದವರಿಂದ ಸಂಗೀತವಿದೆ.