ಸುದ್ದಿಗಳು

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ
ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ-ರಂಗ ನಿರ್ದೇಶಕಿ  ಶೀಲಾ ಹಾಲ್ಕುರಿಕೆ

ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ

ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ-ಕೃಷ್ಣಮೂರ್ತಿ ಕವತ್ತಾರ್
ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ-ಕೃಷ್ಣಮೂರ್ತಿ ಕವತ್ತಾರ್

ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ

ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ
ಮಲ್ಲಾಡಿಹಳ್ಳಿಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವೈಭವಯುತ ಮೆರವಣಿಗೆ

ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ

Follow Us

ನಿವೇದನೆ

ಶ್ರೀ ರಾಮಚಂದ್ರನ ಪದಕಮಲ ಸೋಂಕುತ್ತಲೇ ಗೌತಮಾಶ್ರಮದ ಕಲ್ಲರಳಿ ಕೋಮಲೆಯ ಆಕಾರವನ್ನು ತಳೆಯಿತಂತೆ! ಅದು ತ್ರೇತೆಯ ಕಥೆ. ಇದೇ ಬಗೆಯ ಒಂದು ಪವಾಡ ನಮ್ಮ ಕಲಿಯುಗದಲ್ಲಿ, ಅದರಲ್ಲಿಯೂ ನಮ್ಮ ಕನ್ನಡನಾಡಿನ ನೆಲದ ಮೇಲೆ, ಈಗ ಮುವ್ವತ್ತೈದು ವರ್ಷಗಳ ಕೆಳಗೆ ನಡೆದುದನ್ನು ನೆನೆಯುವುದು ನಮಗೊಂದು ಹೆಮ್ಮೆ. ಕಲ್ಲಾಗಿದ್ದ ಅಹಲ್ಯೆಯನ್ನು ಶಾಪದಿಂದ ಉದ್ಧರಿಸಿದ ರಾಮಚಂದ್ರನು ಸಾಕ್ಷಾತ್ ಮಹಾವಿಷ್ಣುವಿನ ಅಂಶಸಂಭೂತ. ಆದರೆ ನಮ್ಮ ಕಾಲದಲ್ಲಿ, ನಮ್ಮ ದೇಶದಲ್ಲಿ ಅಂತಹುದೇ-ಅಥವಾ ಅದಕ್ಕಿಂತಲೂ ಹೆಚ್ಚು ಸಹಜವಾದ-ಒಂದು ಪವಾಡವನ್ನು ಮೆರೆದ ಮಹಾನುಭಾವ ನಮ್ಮಂತೆಯೇ ಒಬ್ಬ ಶೀಸಾಮಾನ್ಯ. ಯಾವ ಮಹಾಪುರುಷನ ಅಭಿಶಾಪದಿಂದಲೋ, ಶತ ಶತಮಾನಗಳಿಂದ ಸಕಲ ತಾಮಸಗುಣಗಳಿಗೂ ನೆಲೆವನೆಯೆನಿಸಿದ್ದ ಒಂದು ಕುಗ್ರಾಮ-ಮಲ್ಲಾಡಿಹಳ್ಳಿ- ಈಗ ಮುವ್ವತ್ತೈದು ವರ್ಷಗಳ ಕೆಳಗೆ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸಿರಿಯಡಿಗಳ ಸೋಂಕಿನಿಂದ ನಂದನವನದಂತಹ ಸುಂದರ ತಾಣವಾಯಿತು. ಅಲ್ಲಿ ಅವರು ಸ್ಥಾಪಿಸಿದ “ಅನಾಥ ಸೇವಾಶ್ರಮ” ಸತ್ವ ಗುಣ ಪ್ರಧಾನವಾದ ಪವಿತ್ರ ಕ್ಷೇತ್ರವಾಯಿತು. ಅಹಲ್ಯೆಯ ಉದ್ಧಾರ ಕರ್ತೃ ದಿವದಿಂದ ಭುವಿಗೆ ಇಳಿತಂದ ದೇವದೇವ. ಆದರೆ ಅನಾಥಸೇವಾಶ್ರಮದ ಸೃಷ್ಟಿಕರ್ತ ತನ್ನ ಮಹತ್ಕಾರ್ಯದ ಸೋಪಾನಗಳಿಂದ ದಿವ್ಯತ್ವವನ್ನು ಸಾಧಿಸಿದ ಮಹಾಮಾನವ.

ಕಳೆದ ಅರ್ಧ ಶತಮಾನದಿಂದ ಕನ್ನಡನಾಡಿನ ನೆಲದ ಮೇಲೆ ಬೆಳೆ ಬೆಳೆದು, ಮಹಾ ವಟವೃಕ್ಷದಂತೆ ಎತ್ತರ ಬಿತ್ತರಗಳನ್ನು ಸಾಧಿಸಿರುವ ಆತನ ವ್ಯಕ್ತಿತ್ವ ಕನ್ನಡ ಕುಲಕೋಟಿಗೆ ಒಂದು ಹಿರಿಯ ಆಶ್ರಯ ಸ್ಥಾನವಾಗಿದೆ. ಅದರ ತಂಪು ನೆರಳಿನಲ್ಲಿ ವಿಶ್ರಾಂತಿ ಸುಖವನ್ನು ಕಂಡುಕೊಂಡಿರುವ ಸಜ್ಜನ ಸಮುದಾಯ ಸಂಭಾವನಾ ಗ್ರಂಥ ರೂಪದ ಈ ಭಕ್ತಿ ಕುಸುಮಾಂಜಲಿ, ನಂದನವನವನ್ನು, ಶ್ರೀಯವರಿಗೆ ಅರ್ಪಿಸಲು ಬಯಸುತ್ತಿದೆ. ಅವರೆಲ್ಲರ ಪರವಾಗಿ ಶ್ರೀ ಶ್ರೀಯವರನ್ನು ನಮಿಸಿ (ಶ್ರೀ ಕುವೆಂಪುರವರ ಕ್ಷಮೆಯನ್ನು ಯಾಚಿಸುತ್ತಾ)

‘ಇದೋ ಮುಗಿಸಿ ತಂದಿಹೆನ್ ಈ ಬ್ರುಹದ್ ಗ್ರಂಥಮಂ

ನಿಮ್ಮ ಸಿರಿಯಡಿಗೊಪ್ಪಿಸಲ್ಕೆ ಓ ಪ್ರಿಯ ಗುರುವೆ

ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಶ್ಯನಂ’

ಎಂದು ಅತಿವಿನಯ ವಿನಮ್ರತೆಯಿಂದ ಪ್ರಾರ್ಥಿಸಿ ಅವರ ಪದತಲದಲ್ಲಿ ಅರ್ಪಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಅಪ್ರಸ್ತುತವಾದರೂ ಒಂದು ಮಾತನ್ನು ಹೇಳುವುದು ಸೂಕ್ತವೆನಿಸುತ್ತದೆ. ಶ್ರೀ ರಾಘವೇಂದ್ರ ಸ್ವಾಮೀಜಿಯವರು ಸ್ವಭಾವತಹ ಬಿರುದು ಬಾವಲಿಗಳ ವಿರೋಧಿಗಳು; ಮನ್ನಣೆ ಸನ್ಮಾನಗಳನ್ನು ಮೈಲಿಗಳಾಚೆ ಇಟ್ಟಿರುವವರು. ಸರ್ಕಾರದವರು ಸ್ವಪ್ರೇರಣೆಯಿಂದ ನೀಡಿದ ಪ್ರಶಸ್ತಿಯನ್ನು ಒರ್ಮೆಯಲ್ಲ, ಇರ್ಮೆಯಲ್ಲ; ಐದು ಬಾರಿ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದವರು. ಈ ನಿರ್ಭಯ, ನಿರಾಡಂಬರ, ನಿಸ್ವಾರ್ಥದ ಮೂರ್ತಿಯನ್ನು ಈ ನಿರಂಕುಶಮತಿಯನ್ನು-ಈ ಸಂಭಾವನಾ ಗ್ರಂಥದ ಸ್ವೀಕರಣಕ್ಕೆ ಒಪ್ಪಿಸಿದುದು ಸಂಪಾದಕ ಸಮಿತಿಯ ಒಂದು ಮಹಾನ್ ಸಾಹಸ ಮತ್ತು ಸಾಧನೆಯೆಂದು ಹೇಳಿದರೆ ತಪ್ಪಾಗದು. ಇದಕ್ಕಾಗಿ ಸಮಿತಿ ತನಗೆ ತಾನೇ ಅಭಿನಂದಿಸಿಕೊಂಡರೂ ಅನ್ಯಾಯವೇನೂ ಅಲ್ಲ.

ಭರತಖಂಡದ  ಈ ನಮ್ಮ ಪುಣ್ಯ ಭೂಮಿಯಲ್ಲಿ ಆಶ್ರಮ, ಮಠಗಳಿಗಾಗಲಿ, ಸ್ವಾಮಿ ಗುರುಗಳಿಗಾಗಲಿ ಅಭಾವವೇನೂ ಇಲ್ಲ. ಇಲ್ಲಿ ಸುಮಾರು ಐವತ್ತಾರು ಲಕ್ಷ ಸನ್ಯಾಸಿಗಳಿರುವರೆಂದು ಲೆಕ್ಕ ಹಾಕಿದ್ದಾರೆ. ಇವರಲ್ಲಿ ಬಹು ಮಂದಿ ‘ಉದರ ನಿಮಿತ್ತಂ ಬಹುಕೃತ ವೇಷಃ’ ಧಾರಿಗಳು. ಮಳೆಗಾಲದ ನಾಯಿಕೊಡೆಗಳಂತೆ ನಾಡಿನ ಉದ್ದಗಲಕ್ಕೂ ಹಬ್ಬಿ ಹರಡಿರುವ ಇವರಲ್ಲಿ ಹಲವರು ರಾಜಕಾರಣಿಗಳು, ಮತ್ತೆ ಕೆಲವರು ಜಾತಿವಾದಿಗಳು; ಕಿರೀಟವನ್ನು ಧರಿಸಿ ಸಿಂಹಾಸನವೇರುವ, ಹಣದ ಹೊಳೆ ಹರಿಸುವ; ತಮ್ಮ ಇಂದ್ರಜಾಲಗಳಿಂದ, ಪಂಚರಂಗಿತನದಿಂದ, ಪವಾಡಗಳಿಂದ ಜನಜಂಗುಳಿಯನ್ನು ದಂಗುಬಡಿಸುವ ಜರತಾರಿ ಜಗದ್ಗುರುಗಳೂ ಇದ್ದಾರೆ. ಹುಲುಸಾದ ಈ ಕಳೆಯಿಂದ ನಿಜವಾದ ಸದ್ಗುರುಗಳ ಬೆಳೆ ಮುಚ್ಚಿ ಹೋಗಿದೆ. ನಾವೀಗ ಈ ಸಂಭಾವನಾ ಗ್ರಂಥವನ್ನು ಅರ್ಪಿಸುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ಹೊರ ನೋಟಕ್ಕೆ ಸ್ವಾಮಿಗಳ ಜಾತಿಗೆ ಸೇರಿದವರೇ ಅಲ್ಲ. ಅಸಲಿಗೆ ಅವರು ಸನ್ಯಾಸಿಯೇ ಅಲ್ಲ, ಕೇವಲ ಬ್ರಹ್ಮಚಾರಿ; ಇವರ ತಲೆ ಬೋಳಲ್ಲ, ಕ್ರಾಪಿದೆ; ಇವರು ಧರಿಸಿರುವುದು ಕಾವಿಯಲ್ಲ, ಶುದ್ಧ ಖಾದಿಯ ಜುಬ್ಬ, ನಿಕ್ಕರು; ಇವರ ತಲೆಯ ಮೇಲೆ ಕಿರೀಟವಾಗಲಿ, ಕೈಯಲ್ಲಿ ದಂಡ ಕಂಡಗಳಾಗಲಿ ಇಲ್ಲ. ಪಾರುಪತ್ತೇಕಾರರ ಸರ್ವಾಧಿಕಾರಿಗಳ, ಕೈವಾರಿಗಳ ಅಬ್ಬರವಿಲ್ಲ; ಇವರ ಸುತ್ತ ದೀನ ವದನರಾಗಿ, ಮುಗಿದ ಕೈಗಳಿಂದ, ಹೊಗಳಿಕೆಗೆ ಅವಕಾಶವನ್ನು ಕಾಯುತ್ತಿರುವ ಭಕ್ತ ಸಮೂಹವಿಲ್ಲ. ವೇಷ ಭೂಷಣಗಳಂತೆ ಇವರ ನಡೆ ನುಡಿಗಳಲ್ಲಿಯೂ ಯಾವ ಕೃತಕತೆಯೂ ಕಾಣುವುದಿಲ್ಲ. ಅವರು ನಮ್ಮಂತೆಯೇ ಒಬ್ಬ ಶ್ರೀ ಸಾಮಾನ್ಯರಾಗಿ ಕಾಣಿಸುತ್ತಾರೆ. ಅನೇಕ ವೇಳೆ ನಮಗಿಂತಲೂ ಹೆಚ್ಚು ನಮ್ರರಾಗಿ ಕಾಣಿಸುತ್ತಾರೆ. ಮೊದಲ ನೋಟಕ್ಕೆ ಅವರನ್ನು ಸ್ವಾಮಿಗಳೆಂದು ತಿಳಿಯುವುದಿರಲಿ, ‘ಸ್ವಾಮಿಗಳು ಎಲ್ಲಿದ್ದಾರೆ?’ ಎಂದು ಅವರನ್ನೇ ಕೇಳಿರುವುದೂ ಉಂಟು. ಇನ್ನೂ ಅನೇಕ ವೇಳೆ ಅವರನ್ನು ಆಶ್ರಮದ ಒಬ್ಬ ಸಾಮಾನ್ಯ ಸೇವಕನಂತೆ ಬಳಸಿಕೊಂಡವರೂ ಉಂಟು. ( ಸತ್ಯ ಸಂಗತಿ ವೇದ್ಯವಾದಾಗ ಗಲ್ಲ ಗಲ್ಲ ಬಡಿದುಕೊಂಡುದು ಬೇರೆ ವಿಷಯ)

ಶ್ರೀ ರಾಘವೇಂದ್ರ ಸ್ವಾಮೀಜಿ ಹೊರ ನೋಟಕ್ಕೆ ಹಾಗೆ ಕಾಣಿಸಿದರೂ ನಮ್ಮಿಂದ ಸಂಪೂರ್ಣ ಭಿನ್ನರಾದವರು. ಮೊದಲನೆಯದಾಗಿ ಅವರು ನಮ್ಮಂತೆ ಸ್ವಾರ್ಥಪರರಲ್ಲ. ಅವರಿಗೆ ತಮ್ಮದೆಂದು ಕರೆಸಿಕೊಳ್ಳಬಹುದಾದ ಯಾವ ವಸ್ತುವೂ ಇಲ್ಲ. ಲೋಕ ಸೇವೆಯೇ ಅವರ ಜೀವನದ ಹೆಗ್ಗುರಿ; ಅದೇ ಅವರ ಉಸಿರು, ಸಂದೇಶ. ಅವರು ತಮಗೆ ‘ತಿರುಕ’ ಎಂದು ನೂತನ ನಾಮಕರಣ ಮಾಡಿಕೊಂಡಿದ್ದಾರೆ. ಮಹಾತ್ಮ ಗಾಂಧಿ, ಪೂಜ್ಯ ಮದನ ಮೋಹನ ಮಾಳವೀಯ-ಇವರಿಗೂ ಅದೇ ಬಿರುದಿತ್ತು. ಪರಶಿವನ ಪೀಳಿಗೆಗೆ ಸೇರಿದ ಇವರೆಲ್ಲ ಒಂದೇ ಗೋತ್ರಕ್ಕೆ ಸೇರಿದವರು. ಈ ಮೂವರೂ ಕನಸುಗಾರರೇ. ಮಹಾತ್ಮರಿಗೆ ಸ್ವರಾಜ್ಯದ ಕನಸು, ಮಾಳವೀಯರಿಗೆ ಕಾಶಿ ವಿದ್ಯಾನಿಲಯದ ಕನಸು, ರಾಘವೇಂದ್ರರಿಗೆ ‘ಅನಾಥ ಸೇವಾಶ್ರಮ’ದ ಕನಸು. ಮೂವರೂ ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರ ಪಡೆ’ಯಲು ಹೊರಟ ಕರ್ಮಯೋಗಿಗಳೇ. ಸ್ವಾರ್ಥದ ಲವಲೇಶವೂ ಇಲ್ಲದ ಈ ‘ತಿರುಕರಾಜ’ರೂ ಅಕ್ಷಯ ಶಕ್ತಿಯುಳ್ಳ ಭಿಕ್ಷಾಪಾತ್ರೆಯನ್ನು ಹಿಡಿದಿರುವವರು. ಇವರ ತಿರಿಕೆಯ ವಾಮನ ಕೃತಿ ತ್ರಿವಿಕ್ರಮಕರ್ಮರಾಗಿ, ಜಗತ್ತಿನ ಬೊಕ್ಕಸಕ್ಕೆ ವಸ್ತುವನ್ನು ಒದಗಿಸುತ್ತದೆ. ಹಿಂಸೆ, ದ್ವೇಶಗಳ ಸೋಂಕಿಲ್ಲದ ಸೌಹಾರ್ದ, ಸಾಮರಸ್ಯಗಳೇ ಇವರ ಬಂಡವಾಳ; ಆತ್ಮ ಯಜ್ಞದ ಬಲಿದಾನದಿಂದ ಲೋಕ ಕಲ್ಯಾಣದ ಸಿದ್ಧಿಯನ್ನು ಸಾಧಿಸುತ್ತಾರೆ. ಅಗತ್ಯವೆನಿಸಿದಾಗ ಹಾಲಾಹಲವನ್ನು ಕುಡಿದು ಲೋಕಕ್ಕೆ ಅಮೃತವನ್ನು ಹಂಚಬಲ್ಲ ಈ ನೂತನ ನೀಲಕಂಠರು ಸಿಂಧುವಿನಲ್ಲಿ ಬಿಂದುವಾಗಬಯಸುವವರು. ಇಂದ್ರಿಯ, ಮನಸ್ಸು, ಬುದ್ಧಿಗಳ ಮೇಲೆ ಒಡೆತನವನ್ನು ಸ್ಥಾಪಿಸಿಕೊಂಡಿರುವ ಇಂತಹ ಉದಾರ ಚೇತನರೇ ನಿಜವಾದ ಗುರುಗಳು, ಲೋಕ ಗುರುಗಳು.

ಇಂದು ಕರ್ನಾಟಕದ ಉದ್ದಗಲಕ್ಕೂ ಜನಜನಿತವಾಗಿ ಮನೆಮಾತಾಗಿರುವ ಶ್ರೀ ರಾಘವೇಂದ್ರ ಸ್ವಾಮೀಜಿ ಈಗ ಸುಮಾರು ಅರ್ಧ ಶತಮಾನದ ಕೆಳಗೆ (1934-35) ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿಬಿದ್ದ ಹಾಗೆ ಕನ್ನಡ ನಾಡಿನ ನೆಲದ ಮೇಲೆ ಕಾಣಿಸಿಕೊಂಡರು.

ಅಂದು ಅವರು ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಸಮರದ ಒಬ್ಬ ಸೇನಾನಿಯಾಗಿದ್ದರು. ರಾಷ್ಟ್ರದ ಯುವ ಜನಾಂಗಕ್ಕೆ ದೈಹಿಕ ಶಿಕ್ಷಣವನ್ನು ನೀಡಿ, ಅವರ ಬಿಸಿ ನೆತ್ತರಿನಲ್ಲಿ ರಾಷ್ಟ್ರಪ್ರೇಮದ ನವ ಚೈತನ್ಯವನ್ನು ಹರಿಸುವ ಪವಿತ್ರ ಕಾಯಕ ಅವರದು. ಅಂದು ಅವರೊಬ್ಬ ‘ವ್ಯಾಯಾಮ ಮಾಸ್ತರ’. ಅವರು ತಮ್ಮ ಸೇವಾ ಚಕ್ರವನ್ನು ಮೊಟ್ಟಮೊದಲು ಹರಿಯಬಿಟ್ಟುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಅಲ್ಲಿಂದ ಮುಂದೆ ಸುಮಾರು ಎಂಟು ವರ್ಷಗಳಷ್ಟು ದೀರ್ಘ ಕಾಲ ಅವರು ತಮ್ಮ ಬಾಳನ್ನು ಈ ರಾಷ್ಟ್ರಸೇವೆಗಾಗಿ ಮೀಸಲಾಗಿಟ್ಟವರು. ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳು ಅವರ ಕಾರ್ಯರಂಗವಾಗಿದ್ದವು. ಸ್ವೇಚ್ಛೆಯಿಂದ ಸೇವಾದೀಕ್ಷೆಯನ್ನು ಕೈಗೊಂಡಿದ್ದ ಈ ಸಿಡಿಲಮರಿ ಹಾದಿಕೊಂಡೊಯ್ದ ಹಳ್ಳಿಯೊಂದಕ್ಕೆ ಹೋಗಿ ಅಲ್ಲಿನ ಹಿರಿಯರಲ್ಲಿ ದೇಶಪ್ರೇಮದ ಬೀಜವನ್ನು ಬಿತ್ತುವರು; ಅಲ್ಲಿನ ಶಾಲಾ ಉಪಾಧ್ಯಾಯರ ಗೆಳೆತನವನ್ನು ಬೆಳೆಸುವರು. ಅವರುಗಳ ಸಹಾಯ, ಸಹಕಾರಗಳೊಡನೆ ತಮ್ಮ ವ್ಯಾಯಾಮ ಪ್ರದರ್ಶನವೊಂದನ್ನು ಏರ್ಪಡಿಸುವರು. ಹೊರನೋಟಕ್ಕೆ ಕೇವಲ ಸಾಮಾನ್ಯನಂತೆ ಕಾಣಿಸುತ್ತಿದ್ದ ಕಾಚವನ್ನು ಕಟ್ಟಿ ಕಣಕ್ಕಿಳಿದವರೇ ಒಮ್ಮೆ ಮೈ ಕೈಗಳನ್ನು ಕೊಡವಿ ‘ಜೈ ಮಾರುತಿ! ಜೈ ಬಲಭೀಮ!’ ಎಂಬ ಅಬ್ಬರದೊಡನೆ ಮಾಂಸ ಖಂಡಗಳನ್ನು ಉಬ್ಬಿಸ ಹೊರಟರೆಂದರೆ ಸಾಕ್ಷಾತ್ ಮಾರುತಿ ಅಥಾವಾ ಬಲಭೀಮನೇ ಅಲ್ಲಿ ಪ್ರತ್ಯಕ್ಷರಾದಂತೆ ಭಾಸವಾಗುವರು. ದಂಗು ಬಡಿದ ಜನ ಉಸಿರುಗಟ್ಟಿ ನೋಡುತ್ತಿರುವಂತೆಯೇ ಹಲವರು ಉರುಳಿಸಿಕೊಂಡು ಬಂದ ರಸ್ತೆಯ ರೋಣಗಲ್ಲನ್ನು ತಮ್ಮ ಎದೆಯಮೇಲೆ ಉರುಳಿಸಿಕೊಳ್ಳುವರು; ಅದು ಎದೆಯಮೇಲೆ ಕುಳಿತಿರುವಂತೆಯೇ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮೇಲಕ್ಕೇದ್ದು, ಆ ರೋಣಗಲ್ಲನ್ನು ಕೆಳಕ್ಕೆ ಕೊಡಹುವರು; ಭಾರಿ ಕಲ್ಲುಗುಂಡಿಗೆ ಹಗ್ಗವನ್ನು ಕಟ್ಟಿ, ಹಲ್ಲಿನಿಂದ ಅದನ್ನು ಕಚ್ಚಿ ದೂರಕ್ಕೆ ಎಳೆಯುವರು. ಎದೆಯ ಮೇಲೆ ಆನೆಯನ್ನು ನಿಲ್ಲಿಸಿಕೊಳುವರು. ಕೈಯಿಂದ ಲಾರಿಯನ್ನು ದರದರ ಎಳೆದುಕೊಂಡು ಹೋಗುವರು; ಸುತ್ತಲೂ ಹತ್ತುಜನ ನಿಂತು ಏಕ ಕಾಲದಲ್ಲಿ ತನ್ನತ್ತ ಕಲ್ಲುಮಳೆ ಸುರಿಸುತ್ತಿರಲು, ಪ್ರತಿಯೊಂದು ಏಟೂ ಎಸೆದವರತ್ತ ಹೋಗುವಂತೆ ಲಾಠಿಯನ್ನು ತಿರುಗಿಸುವರು. ಅಸಾಧಾರಣವಾದ ಆತನ ದೈಹಿಕ ಶಕ್ತಿ, ಕೈಚಳಕಗಳನ್ನು ಕಂಡು ಬೆಕ್ಕಸ ಬೆರಗಾದ ತರುಣ ವೃಂದ ಅವನ್ನು ತಮಗೂ ಕಲಿಸುವಂತೆ ಪ್ರಾರ್ಥಿಸುವರು. ಅದಕ್ಕಾಗಿಯೇ ಬಂದಿರುವ ಈ ಯುವಕ, ತನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದುದನ್ನು ಕಂಡು, ಅತ್ಯಂತ ಸಂತೋಷದಿಂದ ತಮ್ಮ ಶಿಕ್ಷಣ ಶಿಬಿರವನ್ನು ಪ್ರಾರಂಭಿಸುವರು.

ಅಂದು ‘ವ್ಯಾಯಾಮ ಮಾಸ್ತರ’ ನಡೆಸುತ್ತಿದ್ದ ‘ವ್ಯಾಯಾಮ ಶಿಬಿರ’ಗಳ ಇತಿಹಾಸ ಸಾಕಷ್ಟು ರೋಮಾಚಕಾರಿಯಾಗಿದೆ. ಶ್ರೀ ಚೆಡ್ಡಿಬಾಬು-ಅಂದು ಶ್ರೀ ರಾಘವೇಂದ್ರ ಸ್ವಾಮಿಯವರಿಗೆ ಜನರಿಟ್ಟ ಹೆಸರು-ಬೆಳಗಿನ ನಾಲ್ಕು ಗಂಟೆಗೆ ಸೀಟಿಯನ್ನು ಊದುತ್ತಾ ಊರೊಳಗೆ ನಡೆದು ಶಿಬಿರದ ತಾಣವನ್ನು ಸೇರುವರು. ಆ ವೇಳೆಗೆ ಯುವಕ ಯುವತಿಯರ ತಂಡ ಮೈ ಕೊಡವಿಕೊಂಡು ಮೇಲಕ್ಕೆದ್ದು, ಮುಖ ತೊಳೆದು ಶಿಬಿರದ ಬಳಿಗೆ ಧಾವಿಸುವರು. ‘ಮನೋಜವಮ್ ಮಾರುತ ತುಲ್ಯವೇಗಂ’ ಎಂಬ ಪ್ರಾರ್ಥನೆಯೊಡನೆ ಶಿಬಿರದ ಕಾರ್ಯ ಪ್ರಾರಂಭವಾಗುತ್ತಿತ್ತು. ಬಾಬುರವರ ಶಿಕ್ಷಣವೆಂದರೆ ಕೇವಲ ದೈಹಿಕ ಶಿಕ್ಷಣ ಮಾತ್ರವೇ ಅಲ್ಲ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೂ ಅಲ್ಲಿ ಅವಕಾಶವಿತ್ತು. ಲಾಠಿ ತಿರುಗಿಸುವುದು, ಕುಸ್ತಿ ಮಾಡಿಸುವುದು, ಕತ್ತಿ ಬಾಕು ಭರ್ಜಿಗಳ ಸಮರವಿದ್ಯೆಯನ್ನು ಹೇಳಿಕೊಡುವುದು-ಇವುಗಳಿಂದ ಅಭ್ಯರ್ಥಿಗಳನ್ನು ನಲವತ್ತು ದಿನಗಳೊಳಗಾಗಿ ಶಿಸ್ತಿನ ಸಿಪಾಯಿಯನ್ನಾಗಿ ಸಜ್ಜುಗೊಳಿಸುತ್ತಿದ್ದುದರ ಜೊತೆ ಜೊತೆಯಲ್ಲಿಯೇ ಅವನ ನಡತೆಯನ್ನು ತಿದ್ದಿ ಉತ್ತಮ ಪೌರನನ್ನಾಗಿ ರೂಪಿಸುವ ಕಾರ್ಯವೂ ನಡೆಯುತ್ತಿತ್ತು. ಅಷ್ಟೇ ಅಲ್ಲ; ಆಸನ, ಪ್ರಾಣಾಯಾಮಗಳನ್ನು ಕಲಿಸಿ ಅವನ ಆಧ್ಯಾತ್ಮ ಉನ್ನತಿಯನ್ನೂ ಸಾಧಿಸುತ್ತಿದ್ದರು. ಶಿಬಿರ ಮುಗಿಸುವಷ್ಟರಲ್ಲಿ ತರಬೇತಿಯನ್ನು ಪಡೆದ ತರುಣ ಜನಾಂಗ ಉತ್ಸಾಹದ ಬುಗ್ಗೆಯಾಗುವರು. ಕಡೆಯದಿನ ಆ ಯುವಕ-ಯುವತಿಯರ ಶಕ್ತಿ ಪ್ರದರ್ಶನ ನಡೆಯುವುದು. ಅದನ್ನು ಕಂಡ ಊರ ಜನರ ಹೃದಯ ಉಕ್ಕೇರುವುದು. ಆ ಪ್ರದರ್ಶನವನ್ನು ನೋಡಲೆಂದು ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಬಂದ ಜನರ ಜಾತ್ರೆಯೇ ಅಲ್ಲಿ ನೆರೆಯುವುದು. ಆ ಜನ ತಮ್ಮ ಊರಿನಲ್ಲಿಯೂ ಅಂತಹ ಶಿಬಿರವೊಂದನ್ನು ಏರ್ಪಡಿಸುವಂತೆ ಚಡ್ಡಿಬಾಬುರವರನ್ನು ಪ್ರಾರ್ಥಿಸುವರು. ಮರುದಿನದಿಂದ ಅಲ್ಲಿ ‘ವ್ಯಾಯಾಮಶಿಬಿರ’. ಚಡ್ಡಿಬಾಬುವಿನ ಕೀರ್ತಿಯಿಂದ ಕಸಿವಿಸಿಗೊಂಡ ಪೈಲ್ವಾನರನೇಕರು ಆತನನ್ನು ಕೆಣಕಲೆಂದು ಬಂದು, ಆತನ ಶಕ್ತಿಪ್ರದರ್ಶನವನ್ನು ಕಂಡಮೇಲೆ ಹೇಳದೇ ಕೇಳದೇ ಪಲಾಯನ ಮಂತ್ರವನ್ನು ಪಠಿಸಿದುದೂ ಉಂಟು. ಇಂದು ಎಂಬತ್ತಾರರ ಹರೆಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮೀಜಿಯವರಲ್ಲಿಯೂ ಅಂದಿನ ಉಕ್ಕಿನಂತಹ ನರಮಂಡಲ, ಕಬ್ಬಿಣದಂತಹ ಮಾಂಸಖಂಡಗಳು ಅಚ್ಚಳಿಯದೇ ಉಳಿದುಕೊಂಡುಬಂದಿರುವುದನ್ನು ಕಾಣಬಹುದು. ಈ ‘ವ್ಯಾಯಾಮ ಮಾಸ್ತ’ರು ತಮ್ಮ ಮಾಸ್ತ ಗಿರಿಯಿಂದ ವಿರಮಿಸುವಷ್ಟರಲ್ಲಿ 5162 ಜನ ಸ್ವಯಂಸೇವಕ-ಸೇವಕಿಯರ ದೊಡ್ಡ ಪಡೆಯನ್ನು ಸಂಘಟಿಸಿ, ಸತ್ಯಾಗ್ರಹದ ರಣಕಣಕ್ಕೆ ಇಳಿಸಿದ್ದರು!

ಕಾಲ ಚಕ್ರ ಉರುಳಿತು. ಶತಶತಮಾನಗಳಿಂದ ಭಾರತಮಾತೆಯನ್ನು ಬಂದಿಸಿದ್ದ ದಾಸ್ಯಶೃಂಖಲೆ ಕಡೆಗೊಮ್ಮೆ ಕಳಚಿ ಬಿತ್ತು. ಅದಕ್ಕಾಗಿ ನಡೆಯುತ್ತಿದ್ದ ಸತ್ಯಾಗ್ರಹ ಸಮರ ಕೊನೆಗೊಂಡಿತ್ತು. ರಾಷ್ಟ್ರಪಿತ ಗಾಂಧೀಜಿ ಕಾಂಗ್ರೆಸ್ಸನ್ನು ವಿಸರ್ಜಿಸಿ, ಅದರ ಕಾರ್ಯಕರ್ತರು ದೇಶೋನ್ನತಿಯನ್ನು ಸಾಧಿಸಬಲ್ಲ ರಚನಾತ್ಮಕ ಕಾರ್ಯಕ್ರಮದತ್ತ ತಮ್ಮ ಗಮನವನ್ನು ಹರಿಸುವಂತೆ ಸಂದೇಶವನ್ನು ನೀಡಿದರು. ಆದರೆ ಅವರ ಕರೆಗೆ ಓಗೊಟ್ಟವರು ಎಲ್ಲೋ ಕೆಲವರು ಮಾತ್ರ; ಒಬ್ಬ ವಿನೋದಾಭಾವೆ, ಒಬ್ಬ ಜಯಪ್ರಕಾಶ ನಾರಾಯಣ ಮತ್ತು ಅವರ ಅನುಯಾಯಿಗಳು ಸ್ವಲ್ಪ ಮಂದಿ, ಅಷ್ಟೆ. ಉಳಿದವರೆಲ್ಲ ಹೊಸದಾಗಿ ಬಂದ ಸ್ವಾತಂತ್ರದ ಕೊಳ್ಳೆಯನ್ನುಹಂಚಿಕೊಳ್ಳುವ ರಾಜಕೀಯ ಕಣಕ್ಕೆ ಮುತ್ತಿಗೆ ಹಾಕಿದರು. ಸ್ವಾತಂತ್ರ ಸಮರದ ಕಾಲದಲ್ಲಿ ತಳಕ್ಕಿಳಿದು ಕುಳಿತಿದ್ದ ಜಾತೀಯತೆ, ಅಧಿಕಾರಲಾಲಸೆ, ಗುಂಪುಗುಳಿತನ, ಸ್ವಾರ್ಥ, ದುರಾಸೆ-ಇತ್ಯಾದಿ ಸ್ವಾಭಾವಿಕ ಗುಣಗಳು ಈಗ ಪುಟನೆಗೆದು ಮೆಲಕ್ಕೆದ್ದವು. ಬಡ ಎತ್ತುಗಳು ಹುರುಳಿಯ ಹೊಟ್ಟನ್ನು ಕಂಡಾಗ ಧಾವಿಸುವಂತೆ ಈ ರಾಜಕೀಯ ಮುಖಂಡರು ಆಡಳಿತಾಧಿಕಾರಿಯತ್ತ ನುಗ್ಗಿ ಹೋದರು. ಇಂತಹ ಪರ್ವ ಕಾಲದಲ್ಲಿ ನಮ್ಮ ವ್ಯಾಯಾಮ ಮಾಸ್ತರು ಮಹಾತ್ಮರ ವಾಣಿಯನ್ನು ಶಿರಸಾಧರಿಸಿ, ಸಮಾಜ ಸೇವೆಯತ್ತ ತಮ್ಮ ದೃಷ್ಟಿಯನ್ನು ಹೊರಳಿಸಿದರು. ಸನಾತನದೊಡನೆ ಆಧುನಿಕತೆಯನ್ನು ಸಮನ್ವಯಗೊಳಿಸಿ, ಸರ್ವಸಮತೆಯ ವಿಶ್ವಧರ್ಮವನ್ನು ಪುನರುಜ್ಜೀವನಗೊಳಿಸುವಂತಹ ಕಾಯಕಲ್ಪದಿಂದ ನಮ್ಮ ಸಮಾಜಜೀವನವನ್ನು ಸಚೇತನಗೊಲಿಸಬೇಕೆಂದು ಅವರು ನಿಶ್ಚಯಿಸಿದರು. ‘ವ್ಯಾಯಾಮ ಮಾಸ್ತರ’ರಾಗಿ ಅವರು ಸಾಧಿಸಿದ್ದ ಲೋಕಸಂಗ್ರಹಕಾರ್ಯವೇನೂ ಸಾಧಾರಣವಾದುದಾಗಿರಲಿಲ್ಲ. ಅವರು ನಾಡಿನ ಜನಜಂಗುಳಿಯಲ್ಲಿ ಸಮರಸವಾಗಿ ಬೆರೆತು ಅವರ ಆತ್ಮೀಯತೆಗೆ ಪಾತ್ರರಾಗಿದ್ದರು. ಅವರಿಗಿದ್ದ ವೈಧ್ಯಕೀಯ ಜ್ಞಾನ ಅವರ ಜನಾನುರಾಗವನ್ನು ಇಮ್ಮಡಿಗೊಳಿಸಿತೆಂದು ತೋರುತ್ತದೆ. ಸುತ್ತು ಮುತ್ತಿನ ನಾರು ಬೇರು ಗಿಡ ಮೂಲಿಕೆಗಳಿಂದ ಈ ಚಡ್ಡಿ ಬಾಬು ತಯಾರಿಸಿಕೊಡುತ್ತಿದ್ದ ಔಷಧ ಎಂತೆಂತಹ ಇಂಗ್ಲಿಷ್ ಡಾಕ್ಟರುಗಳಿಗೂ ಮಣಿಯದ ರೋಗಗಳನ್ನು ಗುಣಪಡಿಸುತ್ತಿದ್ದುದನ್ನು ಕಂಡು ಮುಗ್ಧಜನ ಆತನಿಗೆ ಮಾರುಹೋದರು. ಉಪ್ಪು ಹುಲಿ ಖಾರಗಳಿಲ್ಲದ ಆತನ ಊಟ, ಅಸಾಧಾರಣವಾದ ಆತನ ದೇಹಶಕ್ತಿ, ಮುಖದಲ್ಲಿ ಮಿನುಗುತ್ತಿದ್ದ ಬ್ರಹ್ಮತೇಜಸ್ಸು, ಆಚರಿಸುತ್ತಿದ್ದ ಆಸನ ಪ್ರಾಣಾಯಾಮಗಳು, ನಡೆ ನುಡಿಗಳಲ್ಲಿ  ಆಕರ್ಷಣೆ, ಪಾದರಸದಂತಹ ಕಾರ್ಯಚಟುವಟಿಕೆ , ಮುಗುಳ್ನಗೆಯನ್ನು ಚೆಲ್ಲುತ್ತಿರುವ ಮಗುವಿನಂತಹ ಮನಸ್ಸು, ಅವ್ಯಾಜವಾದ ಪ್ರೇಮ, ನಿಷ್ಕಾಮನಾದ ಕರ್ಮ- ಇವುಗಳಿಂದ ಆತನ ಸುತ್ತ ಆಧ್ಯಾತ್ಮಿಕ ಪ್ರಭಾವಲಯವೊಂದು ಸೃಷ್ಟಿಯಾದಂತಿತ್ತು. ಆತನ ಮದ್ದಿನಿಂದ ರೋಗಮುಕ್ತರಾದವರು ಆತನನ್ನು ದೇವವೈಧ್ಯ ಧನ್ವಂತರಿಯೆಂದುಕೊಂಡರು; ಆತನ ಬುದ್ಧಿವಾದದಂತೆ ನಡೆದು ಸಂಸಾರ ಕ್ಲೇಶದಿಂದ ಪಾರಾದವರು ಆತನನ್ನು ಭವರೋಗವೈಧ್ಯನೆಂದರು. ದಿನಗಳೆದಂತೆ ಚಡ್ಡಿ ಬಾಬು ಪವಾಡಪುರುಷನಾಗಿ  ಕಾಣಿಸಿದರು.; ಜನ ಅವರನ್ನು ‘ಸ್ವಾಮಿ’ ಪಟ್ಟಕ್ಕೇರಿಸಿದರು. ( ಸಮಾಜಸೇವೆಗೆ ಕಂಕಣ ಕಟ್ಟಿಕೊಳ್ಳಹೊರಟಾಗ ಶ್ರೀ ರಾಘವೇಂದ್ರಸ್ವಾಮಿಗಳಿಗಿದ್ದ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನಲೆ ಇದು.)

ನಿಸ್ವಾರ್ಥಿಗಳಾದ ಸತ್ವಸಂಪನ್ನರ ಕನಸು ನನಸಾಗಿಯೇ ಆಗುತ್ತದೆ.  ಶ್ರೀ ರಾಘವೇಂದ್ರ ಸ್ವಾಮೀಜಿ ಸುತ್ತುಮುತ್ತಿನ ಸಮಾಜ ಜೀವನದ ಸಂಸ್ಕರಣಕ್ಕಾಗಿ ತಮ್ಮ ಬಾಳನ್ನು ವಿನಿಯೋಗಿಸಬೇಕೆಂದು ಬಯಸಿದಾಗ ತಾನಾಗಿಯೇ ಅಂತಹ ಸನ್ನಿವೇಶವೊಂದು ಹುಟ್ಟಿಕೊಂಡಿತು.ಅವರು ಗೊದಬನಹಾಳು ಎಂಬ ಹಳ್ಳಿಯೊಂದರಲ್ಲಿ ನಲವತ್ತು ದಿನಗಳ ವ್ಯಾಯಾಮಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಅದರ ಮುಕ್ತಾಯ ಸಮಾರಂಭಕ್ಕಾಗಿ ಬಂದಿದ್ದ ಸುತ್ತುಮುತ್ತಿನ ನಾಲ್ಕಾರು ಹಳ್ಳಿಗಳ ಜನ ಮುಂದಿನ ಶಿಬಿರ ತಮ್ಮ ಊರಲ್ಲಿ ನಡೆಯಬೇಕೆಂದು ಬಯಸಿದರು. ಅವರವರಲ್ಲೇ ಸ್ಪರ್ಧೆ ಹುಟ್ಟಿಕೊಂಡಿತು. ಇದರ ಗಂಧವೇ ಇಲ್ಲದ ಬಾಬು ಆಯಾಸನಿವಾರಣೆಗಾಗಿ ಸ್ನಾನಮಾಡುತ್ತಾ ಕುಳಿತಿದ್ದರು. ಸ್ಪರ್ಧಿಗಳಲ್ಲಿ ಒಬ್ಬರಾದ ಮಲ್ಲಾಡಿಹಳ್ಳಿಯ ಮುಖಂಡ ಅಲ್ಲಿಗೆ ನುಗ್ಗಿ ಹೋದ. ಬಾಬುಗಳನ್ನು ತನ್ನ ಊರಿಗೆ ಬರುವಂತೆ ಆಹ್ವಾನಿಸಿದ. ಅವರಿಂದ ‘ಅಸ್ತು’ ಎನಿಸಿಕೊಂಡೂ ಬಂದ. ಬಾಬುಗಳು ಜಳಕವನ್ನು ಮುಗಿಸಿ ಹೊರಕ್ಕೆ ಬಂದಾಗ ನಾಲ್ಕೂ ಹಳ್ಳಿಯ ಮುಕಂಡರು ಹೌಹಾರಿದರು. ತಮ್ಮ ಊರಿಗೆ ಬರದಿದ್ದರೂ ಚಿಂತೆಇಲ್ಲ, ಮಲ್ಲಾಡಿ ಹಳ್ಳಿಗೆ ಹೋಗುವುದು ಬೇಡ- ಎಂದು ಅವರು ಬಾಬುಗಳಲ್ಲಿ ಬಿನ್ನವಿಸಿಕೊಂಡರು. ‘ಮಲ್ಲಾಡಿ ಹಳ್ಳಿ ಎಂದರೆ ಅದೊಂದು ಪುಂಡರ ಕೊಂಪೆ ; ನೀವು ಅಲ್ಲಿಂದ ಮರ್ಯಾದೆಯಾಗಿ ಹಿಂದಿರುಗುವುದೇ ಅಸಾಧ್ಯ; ನಿಮ್ಮ ಜೀವಕ್ಕೂ ಅಪಾಯ ತಟ್ಟೀತು.’ಎಂದು ಮುಂತಾಗಿ ತಿಳಿಸಿದರು. ಎಲ್ಲದಕ್ಕೂ ಬಾಬುಗಳ ಉತ್ತರ ಒಂದೇ ‘ಮಾತು ಕೊಟ್ಟು ಆಗಿದೆ.’ ತಾವು ಅವರ ಮನಸ್ಸನ್ನು ತಿದ್ದುವುದು ಅಸಾಧ್ಯವೆನಿಸಿದಾಗ, ಆ ಮುಖಂಡರು ಶ್ರೀ ಶಂಕರಲಿಂಗ ಭಗವಾನನಲ್ಲಿಗೆ ಹೋದರು. ನುಲೇನೂರಿನ ಶ್ರೀ ಶಂಕರಲಿಂಗ ಭಗವಾನರಿಗೆ ಶ್ರೀ ರಾಘವೇಂದ್ರರಲ್ಲಿ ಅಸಾರವಾದ ಪ್ರೀತಿ, ವಾತ್ಸಲ್ಯ, ಸಲಿಗೆ ಶ್ರೀ ರಾಘವೇಂದ್ರರಿಗೂ ಭಗವಾನರಲ್ಲಿ ಅಷ್ಟೇ ಆದರ, ಭಕ್ತಿ, ಗೌರವ; ತಮ್ಮ ಮಮತೆಯ ಕೂಸು ಮುಲ್ಲಾಡಿ ಹಳ್ಳಿಗೆ ಹೋಗಲು ನಿಶ್ಚಯಿಸಿರುವುದನ್ನು ಕೇಳಿ ಅವರಿಗೆ ದಿಗ್ಭ್ರಮೆಯಾಯಿತು. ಅವರು ಶ್ರೀ ರಾಘವೇಂದ್ರರನ್ನು ತಮ್ಮ ಬಳಿಗೆ ಕರೆಸಿಕೊಂಡರು.

‘ ಏ ಹನುಮಂತರಾಯ (ಕೋತಿ, ಕಪಿ, ಹನುಮಂತರಾಯ ಇತ್ಯಾದಿ ಹೆಸರುಗಳಿಂದ ಕೂಗಿ ರಾಘವೆಂದ್ರರನ್ನು ಗೇಲಿಮಾಡುತ್ತಿದ್ದ. ಭಗವಾನರಿಗೆ ಅವರು ಮಾರುತಿಯ ಅಪರಾವತಾರ ಎಂಬ ಭಾವನೆ ಇತ್ತು.) ಏನದು ಕಪಿಮುಷ್ಟಿ ? ನೀನು ಮುಲ್ಲಾಡಿ ಹಳ್ಳಿಗೆ ಹೋಗ ಕೂಡದು’ ‘ ಅಪ್ಪಯ್ಯ- (ಭಗವಾನರನ್ನು ರಾಘವೇಂದ್ರರು ಕರೆಯುತ್ತಿದ್ದ ರೀತಿ)- ನಾನು ಅವರಿಗೆ ಮಾತು ಕೊಟ್ಟಿದ್ದೇನೆ.’ ‘ಚಿಂತೆಯಿಲ್ಲ. ಪದವಾಕ್ಯ ಪ್ರಮಾನಜ್ನನೆಂದು ನಿನ್ನನ್ನು ಯಾರೂ ಕರೆಯಬೇಕಾದುದಿಲ್ಲ. ನೀನು ಹೋಗಕೂಡದು.’ ‘ಇಲ್ಲ ಅಪ್ಪಯ್ಯ, ನಾನು ಹೋಗಲೇ ಬೇಕು’ ‘ನೀನು ರಾಮದೂತನಯ್ಯ, ನನಗೆ ಗೊತ್ತು. ಕೊಟ್ಟಮಾತು, ಇಟ್ಟ ಗುರಿ ತಪ್ಪಕೂಡದು. ಆದರೂ ಹೋಗುವುದು ಬೇಡ.’ ‘ಇಲ್ಲ ಅಪ್ಪಯ್ಯ ನನ್ನ ನಾಲಿಗೆಯನ್ನು ನಾನು ಕತ್ತರಿಸಿಕೊಳ್ಳಲಾರೆ.’ ‘ನನ್ನ ಮಾತನ್ನು ಮೀರುವೆಯೇನು?’ ‘ಮೀರುವುದಕ್ಕೆ ಅವಕಾಶ ಕಲ್ಪಿಸಬೇಡಿ. ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಮುಗಿಯಿತು.’

Next…