ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ನಿವೇದನೆ

ಇಲ್ಲಿಗೆ  ಶ್ರೀ ರಾಘವೇಂದ್ರರ ಪಠ್ಯಪುಸ್ತಕ ಶಿಕ್ಷಣ ಮುಗಿದಂತಾಯಿತು. ಆದರೆ ಜ್ಞಾನವೆಂಬುದು ಪ್ರತಿಭೆ ಪಾಂಡಿತ್ಯ, ಲೋಕಾನುಭವಗಳೆಂಬ ತ್ರಿವೇಣಿ ಸಂಗಮದಿಂದ ಉದಿಸುವ ದೇವಗಂಗೆ. ಬಾಬಾ ಲಕ್ಷ್ಮಣದಾಸರಿಂದ ಹೊರಹೊರಟ ರಾಘವೇಂದ್ರರು ಭಾರತದ ಉದ್ದಗಲಕ್ಕೂ ಸಂಚರಿಸಿ, ಮಾನವ  ಸ್ವಭಾವವನ್ನು ಆಳವಾಗಿ ಅಭ್ಯಸಿಸಿ ತಮ್ಮ ಬುದ್ಧಿ ಭಾವಗಳ ಕೋಷವನ್ನು ಶ್ರೀಮಂತಗೊಳಿಸಿಕೊಂಡರು. ಆ ಕಾಲದಲ್ಲಿ ಅನೇಕ ಸಾಧು ಸತ್ಪುರುಷರ ದರ್ಶನವಾಯಿತು ಅವರಿಗೆ. ಹೃಷಿಕೇಶದ ಶಿವಾನಂದರು, ಲೋನಾವಲಯದ ಕುವಲಯಾನಂದರು, ಮಧುರೆಯ ಭಗವಾನ್ ಜೀ, ಪುರಿಯ ಓಂಕಾರನಾಥಜೀ, ಕೇದಾರದ ಶಾಂತಿನಾಥ ಆನಂದಜೀ, ಔಂಧ್ ಸಂಸ್ಥಾನದ ಬಾಬಾ ಸಾಹೇಬ್ ಪಂಥ್, ಯೋಗಾನಂದ ಮೊದಲಾದ ಆಧ್ಯಾತ್ಮ ಜಗಜ್ಜ್ಯೋತಿಗಳನ್ನು ಸಂದರ್ಶಿಸಿ, ಅವರೊಡನೆ ಲೌಕಿಕ ಪರಲೌಕಿಕ ವಿಚಾರಗಳನ್ನು ಚರ್ಚಿಸಿದರು; ತಮ್ಮ ಅನುಭವಗಳನ್ನು ಅವರ ಅನುಭವ ಓರೆಗಲ್ಲಮೇಲೆ ಉಜ್ಜಿನೋಡಿ ತೃಪ್ತಿಯನ್ನು ಹೊಂದಿದರು.

ಸಹಸ್ರ ಉಳಿಯ ಪೆಟ್ಟಿಗೆ ಸಿಕ್ಕಿ ಕಗ್ಗಲ್ಲು ದಿವ್ಯ ಸುಂದರ ವಿಗ್ರಹವಾಯಿತು. ಇದನ್ನು ಕಂಡು ಸಂತೃಪ್ತಿಗೊಂಡ ಶಿವಾನಂದರು ‘ಕರ್ಣಾಟಕಿ! ನೀನು ಇದುವರೆಗೆ ಸಂಪಾದಿಸಿದುದನ್ನು ಸದ್ವಿನಿಯೋಗ ಮಾಡು. ಯೋಗಶಾಸ್ತ್ರವನ್ನು ನಿನ್ನ ತಾಯ್ನಾಡಿನಲ್ಲಿ ಪ್ರಚಾರ ಮಾಡುತ್ತಾ, ಅದರ ಜೊತೆಯಲ್ಲಿಯೇ ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಮರಕ್ಕೆ ಅಗತ್ಯವಾದ ಸತ್ಯಾಗ್ರಹಿಗಳ ತಂಡವನ್ನು ನಿರ್ಮಾಣ ಮಾಡು. ದೈವಶಕ್ತಿ ನಿನ್ನ ಬೆಂಬಲಕ್ಕಿದೆ’ ಎಂದು ಅಪ್ಪಣೆ ಮಾಡಿದರು. ಅಷ್ಟರಲ್ಲಿ ರಾಘವೇಂದ್ರರು ಕರ್ನಾಟಕಕ್ಕೆ ಹೋಗಲೇಬೇಕಾದ ಸನ್ನಿವೇಶವೊಂದು ತಾನಾಗಿಯೇ ಒದಗಿಬಂತು. 1934 ಇಸವಿ, ಕಾರವಾರ ಜಿಲ್ಲೆಯ ಭಟ್ಕಳದಲ್ಲಿ ‘ಹನುಮಾನ್ ವ್ಯಾಯಾಮ ಶಾಲೆ’ಯ ಉದ್ಘಾಟನಾ ಸಮಾರಂಭವನ್ನು ನಡೆಸಿಕೊಡುವಂತೆ ಪ್ರೊಫೆಸರ್ ಮಾಣಿಕ್ಯರಾಯರಿಗೆ ಕರೆ ಬಂತು. ಅವರು ತಮ್ಮ ಪಟ್ಟಶಿಷ್ಯ ರಾಘವೇಂದ್ರರಾಯರನ್ನು ಆ ಕಾರ್ಯಕ್ಕೆ ನೇಮಿಸಿದರು. ಸಮಾರಂಭದ ಆಹ್ವಾನಪತ್ರಿಕೆಗಳಲ್ಲಿ ರಾಘವೇಂದ್ರ ರಾವ್ ಬಿ.ಪಿ.ಸಿ. ಅವರು ಮುಖ್ಯ ಅತಿಥಿಗಳೆಂದು ಸೂಚಿಸಲಾಯಿತು. ಅವರು ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ವ್ಯಾಯಾಮಶಾಲೆಯವರಿಗಿಂತ ಮುಂಚೆ ಪೋಲೀಸಿನವರು ಅವರನ್ನು ಎದುರುಗೊಂಡು ವಾರಂಟ್ ಜಾರಿಮಾಡಿದರು. ಇದೇಕೆ ಹೀಗೆ? ಎಂದು ವಿಚಾರಿಸಿದಾಗ ರಾಘವೇಂದ್ರ ರಾವ್ ರವರ ಬಿ.ಪಿ.ಸಿ ಡಿಗ್ರಿ ಇದಕ್ಕೆ ಕಾರಣ ಎಂದು ಗೊತ್ತಾಯಿತು. ಆ ಅಕ್ಷರಗಳಿಗೆ ಬೊಂಬಾಯಿ ಪ್ರೊವಿನ್ಶಿಯಲ್ ಕಾಂಗ್ರೇಸ್ ಗೆ ಸೇರಿದವರೆಂದು ಪೋಲೀಸರು ಅರ್ಥಮಾಡಿಕೊಂಡಿದ್ದರು. ನಿಜ ಸಂಗತಿ ಗೊತ್ತಾದಮೇಲೆ ಸಮನ್ಸನ್ನು ಹಿಂದಕ್ಕೆ ತೆಗೆದುಕೊಂಡರು. ಇದಾದನಂತರ ಅವರು ವ್ಯಾಯಾಮಶಾಲೆಯ ಉದ್ಘಾಟನೆಯನ್ನು ವಿಜ್ರಂಭಣೆಯಿಂದ ನಡೆಸಿ, ಬರೋಡಾಕ್ಕೆ ಹಿಂತಿರುಗಿದರು. ಅದರ ಮರುವರ್ಷ ಅವರು ಗುರುತರವಾದ ಕಾರ್ಯಭಾರವನ್ನು ಹೊತ್ತು, ಗುರುಗಳ ಅಣತಿಯನ್ನು ನಡೆಸುವುದೆಕ್ಕೆಂದೇ ಕರ್ನಾಟಕಕ್ಕೆ ಬಂದರು.

ಮಲ್ಲಾಡಿಹಳ್ಳಿಯಲ್ಲಿದ್ದ ‘ಬಣ್ಣದ ಮನೆ,ಯೊಂದು ‘ವ್ಯಾಯಾಮ ಮಾಸ್ತರ’ ವಸತಿಗೃಹವಾಯಿತು. ನೆಯ್ಗೆಯವರೆ ಮುಖ್ಯನಿವಾಸಿಯಾಗಿರುವ ಆ ಹಳ್ಳಿಯಲ್ಲಿ ನೂಲಿಗೆ ಬಣ್ಣ ಹಾಕಲೆಂದು ನಿರ್ಮಾಣವಾಗಿದ್ದ ಎರಡು ಚಿಕ್ಕ ಕೊಠಡಿಗಳ ಕೊಂಪೆ ಅದು. ಗಾಳಿ ಬೆಳಕುಗಳಿಗೆ ಅದರಲ್ಲಿ ಪ್ರವೇಶವಿಲ್ಲ. ಆದರೆ ವ್ಯಾಯಾಮ ಮಾಸ್ತರ ವಸತಿಗೆ ಎಲ್ಲಿಯ ಅಡ್ಡಿ ಆತಂಕ? ಅವರು ಅದರಲ್ಲಿ ಠಿಕಾಣಿ ಹಾಕಿ ತಮ್ಮ ಕಾರ್ಯ ಚಟುವಟಿಕೆಗಳಿಗೆಲ್ಲ ಅದನ್ನು ಕೇಂದ್ರವಾಗಿ ಮಾಡಿಕೊಂಡರು. ಮರುದಿನದಿಂದ ಅವರ ಶಿಬಿರ ಪ್ರಾರಂಭವಾಯಿತು. ಅದರ ಜೊತೆಯಲ್ಲಿಯೇ ಹಳ್ಳಿಯ ಜನಜೀವನದ ಕಾಯಕಲ್ಪವೂ ಪ್ರಾರಂಭವಾಯಿತು. ಮಲ್ಲಾಡಿಹಳ್ಳಿ ಎಂದರೆ ಕೊಳಕೊಗೆ ಮತ್ತೊಂದು ಹೆಸರು. ಮನೆಮನೆಯ ಮುಂದೆಯೂ ಕಸದ ರಾಶಿ, ಬೀದಿಗಳಲ್ಲಿ ಕಾಲಿಡುವುದೇ ಕಷ್ಟವೆನ್ನುವಷ್ಟು ಹೇಸಿಗೆ, ಬಚ್ಚಲ ರೊಚ್ಚು ಅಲ್ಲಲ್ಲೇ ನಿಂತು ದುರ್ವಾಸನೆ, ಮನೆಯ ಪಕ್ಕದಲ್ಲೇ ಗೊಬ್ಬರದ ಗುಂಡಿ. ಊರಿನ ಪರಿಸರದಂತೆ ಅಲ್ಲಿನ ಜನರ ದೇಹ, ಬುದ್ಧಿ, ಮನಸ್ಸು-ಎಲ್ಲವೂ ಕೊಳಕೆ. ಶ್ರೀ ರಾಘವೇಂದ್ರ ಈ ಕೊಳಕನ್ನೆಲ್ಲ ನಿರ್ಮೂಲ ಮಾಡುವ ಸ್ಯಾನಿಟರಿ ಇನ್ ಸ್ಪೆಕ್ಟರಾಗಲು ನಿರ್ಧರಿಸಿದರು. ತಮ್ಮ ಸ್ವಭಾವಕ್ಕೆ ತಕ್ಕಂತೆ ಅವರು ಅಲ್ಲಿನ ಜನರಲ್ಲಿ ಸಮರಸರಾಗಿ ಬೆರೆತರು. ಮನೆಮನೆಗೂ ಪಾದಯಾತ್ರೆ ಬೆಳೆಸಿ, ಅವರ ಮನಗಳ ಒಳಗೂ ಹೊರಗೂ ಶುದ್ಧವಾಗಿರಬೇಕೆಂದು ಬೋಧಿಸಿದರು. ಆದರೆ ತಲೆಮಾರುಗಳಿಂದ ಬೆಳೆದುಬಂದಿರುವ ತಮ್ಮ ಶೀಲ ಸ್ವಭಾವಗಳನ್ನು ಅವರು ಒಂದೇ ದಿನಕ್ಕೆ ಬದಲಾಯಿಸಲು ಪಾಪ ಹೇಗೆ ಸಾಧ್ಯ? ಶ್ರೀ ರಾಘವೇಂದ್ರರ ಬೋಧನೆ ಗೋರ್ಕಲ್ಲಮೇಲೆ ಮಳೆಗರೆದಂತಾಯಿತು. ಇದನ್ನು ಕಂಡು ಆ ಚಡ್ಡಿಬಾಬುವೇನು ಧೃತಿಗೆಡಲಿಲ್ಲ. ಅಸಾಧ್ಯವೆಂಬುದು ಆತನ ಕೋಶದಲ್ಲಿಲ್ಲ. ಆತ ಮತ್ತೊಮ್ಮೆ ಆ ಜನಕ್ಕೆ ಬೋಧಿಸುವುದಕ್ಕೂ ಹೋಗಲಿಲ್ಲ. ಮರುದಿನ ಬೆಳಗಿನಜಾವ ಮೂರು ಗಂಟೆಗೆ ಮೇಲಕ್ಕೆದ್ದವರೇ ಕೈಲಿ ಪೊರಕೆಯನ್ನು ಹಿಡಿದು ಜಲಗಾರನ ಕರ್ಮವನ್ನು ಕೈಗೊಂಡರು. ಬೀದಿಯೆಲ್ಲ ಚೊಕ್ಕಟವಾಯಿತು. ಮನೆಮನೆಯ ಮುಂದೆ ಸೆಗಣಿನೀರನ್ನು ಹಾಕಿ ರಂಗೋಲೆ ಎಳೆಗಳನ್ನು ಬಿಡಿಸಿದ್ದಾಯಿತು. ಬೆಳಗ್ಗೆ ಎದ್ದು ಜನ ಬಾಗಿಲನ್ನು ತೆರೆದಾಗ ಇದೆಂತಹ ಇಂದ್ರಜಾಲ! ಜನರು ಇನ್ನೂ ಕನಸನ್ನು ಕಾಣುತ್ತಿರುವೆ ಎಂದು ಭಾವಿಸಿ ಕಣ್ಣುಜ್ಜಿಕೊಂಡರು. ಅಲ್ಲ, ಕನಸಲ್ಲ; ಇದು ಚಡ್ಡಿಬಾಬುವಿನ ಕೆಲಸ! ಕಣ್ಣೀಗೆ ಇಂಪನ್ನು ಹೃದಯಕ್ಕೆ ತಂಪನ್ನು ನೀಡುತ್ತಿದ್ದ ಈ ದೃಷ್ಯವನ್ನು ಕಂಡು, ಅದುವರೆಗೂ ಕತ್ತೆಯಂತೆ ಬಿದ್ದಿರುತ್ತಿದ್ದ ಜನರಲ್ಲಿ ಕರ್ತವ್ಯಪ್ರಜ್ಞೆ ಮೂಡಿತು. ಅವರು ಒಬ್ಬೊಬ್ಬರಾಗಿ, ಒಟ್ಟೊಟ್ಟಾಗಿ ಶ್ರೀ ರಾಘವೇಂದ್ರರ ಬಳಿಗೆ ಹೋಗಿ ಕ್ಷಮೆಯನ್ನು ಯಾಚಿಸಿದರು; ಇನ್ನು ಮುಂದೆ ಚೊಕ್ಕಟವಾಗಿರುವುದಾಗಿ ಮಾತು ಕೊಟ್ಟರು, ತಮ್ಮ ಮಾತಿನಂತೆ ನಡೆದುಕೊಂಡರು. ಇದು ಪರಿಷ್ಕರಣದ ಮೊದಲ ಘಟ್ಟ.

ತರಲೆಯ ತೌರುಮನೆಯಾಗಿದ್ದ ಮಲ್ಲಾಡಿಹಳ್ಳಿಯಲ್ಲಿ ಜಗಳ ಕದನಗಳಿಗೆ ಕೊರತೆಯೇ? ಅದರಲ್ಲಿಯೂ ಕುಡಿತ, ಜೂಜುಗಳು, ತಾಂಡವನೃತ್ಯ ಮಾಡುತ್ತಿರುವಾಗ? ದಿನ ಬೆಳಗಾದರೆ ಹೊಡೆದಾಟ, ಬಡಿದಾಟ, ಮಾರಾಮಾರಿ. ಶ್ರೀ ರಾಘವೇಂದ್ರರ ಪ್ರಭಾವದಿಂದ ಇದು ಬಹುಬೇಗ ಹತೋಟಿಗೆ ಬಂತು. ವ್ಯಾಯಾಮ ಮಾಸ್ತರ ಶಿಷ್ಯವರ್ಗಕ್ಕೆ ಗುರುಗಳಲ್ಲಿ ಅಪಾರವಾದ ಭಕ್ತಿ, ಗೌರವ, ಅಭಿಮಾನ. ಅವರು ಮಾಡುತ್ತಿದ್ದ ಭೋದನೆ, ಕಲಿಸುತ್ತಿದ್ದ ಆಸನ, ಪ್ರಾಣಾಯಾಮಗಳು ಆ ಯುವಕರ ತಂಡದಲ್ಲಿ ಸಂಸ್ಕೃತಿ ನಾಗರಿಕತೆಯನ್ನು ಬಿತ್ತಿ ಬೆಳೆಸುತ್ತಿದ್ದವು. ಈ ಯುವಕರ ಪರಿವರ್ತನೆಯನ್ನು ಕಂಡು ಊರಿನ ಹಿರಿಯರಲ್ಲಿಯೂ ಸೌಜನ್ಯ ಸಜ್ಜನಿಕೆಗಳು ಅಂಕುರಿಸಿದವು. ತಮ್ಮ ಜಗಳಗಳನ್ನು ನೆತ್ತರು ಹರಿಸಿ ನಿಶ್ಚಯಿಸುವುದಕ್ಕೆ ಬದಲಾಗಿ ಶ್ರೀ ರಾಘವೇಂದ್ರರ ತೀರ್ಮಾನಕ್ಕೆ ಒಪ್ಪಿಸಲು ನಿಶ್ಚಯಿಸಿದರು.ನಿಷ್ಪಕ್ಷಪಾತವಾದ ಅವರ ತೀರ್ಮಾನಕ್ಕೆ ವಾದಿ ಪ್ರತಿವಾದಿಗಳಿಬ್ಬರೂ ತಲೆ ಬಾಗಿದರು. ಊರಿನ ರೋಗರುಜಿನಗಳಿಗಂತೂ ಅವರು ಧನ್ವಂತರಿಯಾಗಿದ್ದರಲ್ಲ ! ಆದ್ದರಿಂದ ಅವರಲ್ಲಿದ್ದ ಆದರ ಗೌರವಗಳು ಒಂದಕ್ಕೆ ಹತ್ತಾಗಿ ಬೆಳೆದವು. ಎಲ್ಲ ವಿಷಯಗಳಲ್ಲಿಯೂ ಶ್ರೀ ರಾಘವೇಂದ್ರರ ಸಲಹೆಯನ್ನು ಪಡೆಯುವುದು, ಅದರಂತೆ ನಡೆಯುವುದು ಪ್ರಾರಂಭವಾಯಿತು. ಅವರು ಊರವರೆಲ್ಲ ‘ಅಪ್ಪಯ್ಯ’ ಆದರು. ಅವರು ಹಾಕಿದ ಗೆರೆಯನ್ನು ಯಾರೂ ದಾಟುತ್ತಿರಲಿಲ್ಲ. ದಿನದಿನವೂ ಸಂಜೆ ಒಂದು ಗಂಟೆಯ ಕಾಲ ಭಜನೆ ನಡೆಯುವುದು. ‘ಅಪ್ಪಯ್ಯ’ ಅದರ ಮುಂದಾಳು. ಅವರೇ ಹಾರ್ಮೊನಿಯುಂ ಬಾರಿಸಿಕೊಂಡು ದೇವರ ನಾಮವನ್ನು ಹೇಳಿಕೊಡುವುದು. ಆಗ್ಗೆ ಕೆಲವು ವರ್ಷಗಳ ಹಿಂದೆ ಪರಪ್ಪಸ್ವಾಮಿ ಎಂಬ ಸಂತನೊಬ್ಬ ಆ ಪ್ರಾಂತ್ಯದಲ್ಲಿ ಮನೆಮಾತಾಗಿದ್ದ. ಪವಾಡಪುರುಷನಾದ ಆತನಲ್ಲಿ ಊರವರಿಗೆಲ್ಲ ಪರಮಭಕ್ತಿ. ಆತನ ಚಿತ್ರಪಟವನ್ನು ಇಟ್ಟುಕೊಂಡು ಭಜನೆ ಮಾಡುತ್ತಿದ್ದರು. ವಾರಕ್ಕೊಮ್ಮೆ ಅದನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಊರಲ್ಲೆಲ್ಲ ಉತ್ಸವ ಹೋಗುತ್ತಿದ್ದುದೂ ಉಂಟು. ಯಾರಿಗಾದರೂ ಅನುವು ಆಪತ್ತುಗಳಾದರೆ ಆತನಿಗೆ ಹರಸಿಕೊಳ್ಳುತ್ತಿದ್ದರು. ‘ನಂಬಿ ಕೆಟ್ಟವರಿಲ್ಲವೋ ಅಲ್ಲವೇ ? ಆ ನಂಬಿಕೆ ಅವರಿಗೆ ಫಲವನ್ನೂ ಕೊಡುತ್ತಿತ್ತು. ಅವಧೂತನಾಗಿದ್ದ ಆ ಸಂತನ ಪೂಜೆಯನ್ನು ಮನೆಯಲ್ಲಿ ನಡೆಸುವುದಕ್ಕಿಂತ ಪ್ರತ್ಯೇಕವಾದ ಮಠವೊಂದನ್ನು  ಕಟ್ಟುವಂತೆ ಶ್ರೀ ರಾಘವೇಂದ್ರರು ಸಲಹೆಯಿತ್ತರು. ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಆ ಕಾರ್ಯವನ್ನು ತಾವೇ ನಿಂತು ನಡೆಸಿಕೊಡುವಂತೆ ಅವರನ್ನು ಊರವರು ಪ್ರಾರ್ಥಿಸಿದರು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಶಿಬಿರ ಮುಗಿಯುತ್ತಲೇ ತಾವು ಅಲ್ಲಿಂದ ಹೊರಡುವುದಾಗಿ ತಿಳಿಸಿದರು.

ಸತ್ಯಸಂಗತಿ ಅನೇಕ ವೇಳೆ ಕಟ್ಟುಕತೆಗಿಂತಲೂ ಹೆಚ್ಚು ರಮ್ಯ, ರೋಮಾಂಚಕಾರ. ಶ್ರೀ ರಾಘವೇಂದ್ರರು ಮಲ್ಲಾಡಿಹಳ್ಳಿಯಲ್ಲಿ ಸ್ಥಾಪಿಸಿದ ‘ಅನಾಥ ಸೇವಾಶ್ರಮ’ದ ಇತಿಹಾಸ ಅದಕ್ಕೊಂದು ಉತ್ತಮವಾದ ಉದಾಹರಣೆ. ಅದರ ಜೊತೆ ಜೊತೆಯಲ್ಲಿಯೇ ಅವರ ‘ವ್ಯಾಯಾಮ ಮಾಸ್ತರ’ತನ ಮುಗಿದು ‘ಸ್ವಾಮಿ’ ಪಟ್ಟವೂ, ಬಾಲ್ಯ ಕಳೆದು ಯೌವನ ಮೂಡುವಷ್ಟು  ಸ್ವಾಭಾವಿಕವಾಗಿ, ಮೈವೆತ್ತು ನಿಲ್ಲುತ್ತದೆ. ಮಲ್ಲಾಡಿಹಳ್ಳಿಯ ನಲವತ್ತು ದಿನಗಳ ಶಿಬಿರಸಾಂಗವಾಗಿ ನೆರವೇರಿತು. ಮರುದಿನ ಶ್ರೀ ರಾಘವೇಂದ್ರರು ತಮ್ಮ ಪ್ರಯಾಣಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾಗ ಬಾಗಿಲ ಹೊರಗೆ ಯಾರೋ ಗುಸುಗುಸು ಮಾತಾಡುತ್ತಿದ್ದುದು ಕೇಳಿಸಿತು. ‘ಯಾರದು ?’ ಎಂಬ ಅವರ ಪ್ರಶ್ನೆಗೆ ಉತ್ತರವಾಗಿ ಮುದುಕಿಯೊಬ್ಬಳು ಫಲತಾಂಬೂಲದ ತಟ್ಟೆಯೊಡನೆ ಒಳಕ್ಕೆ ಪ್ರವೇಶಿಸಿದಳು. ಹಳೆಯ ಕಾಲದ ಇಪ್ಪತ್ತೈದು ಬೆಳ್ಳಿ ರೂಪಾಯಿಗಳೊಡನೆ ಆ ತಟ್ಟೆಯನ್ನು ಅವರ ಮುಂದೆ ಇಟ್ಟು ಆಕೆ ದೀರ್ಘದಂಡ ನಮಸ್ಕಾರ ಹಾಕಿದಳು. ಶ್ರೀ ರಾಘವೇಂದ್ರರು ಅಪ್ರತಿಭರಾಗಿ ‘ಏನಿದು ಸಂಕಜ್ಜಿ ?’ ಎಂದು ಕೇಳಿದರು. ಸಂಕಜ್ಜಿ ಎದ್ದು ನಿಂತು ಕೈಮುಗಿದುಕೊಂಡು ‘ಅಪ್ಪಯ್ಯ, ನಾನು ಗಂಡ, ಮಕ್ಕಳು ಒಂದೂ ಇಲ್ಲದ ಮುಪ್ಪಿನ ಮುದುಕಿ’ ನನ್ನ ಜೀವನದಲ್ಲಿ ಉಳಿಸಿರುವ ನಾಲಕ್ಕು ಕಾಸನ್ನು ನಿನ್ನ ಪಾದಕ್ಕೆ ಒಪ್ಪಿಸುತ್ತೀನಿ. ಪರಪ್ಪಸ್ವಾಮಿ ಮಠ ಕಟ್ಟಿಸಬೇಕು. ಅಂದೆಲ್ಲ, ನೀನು ನಿಂತು ಆ ಕೆಲಸ ಮಾಡು’ ಎಂದಳು. ಆಕೆಯ ಮಾತನ್ನು ಕೇಳಿ ನಕ್ಕು ರಾಘವೇಂದ್ರರು ‘ಅಮ್ಮ, ಇಪ್ಪತ್ತೈದಕ್ಕೆ ಮಠ ಕಟ್ಟಿಸಲು ಸಾಧ್ಯವೇ?’ ಎಂದರು. ಆಕೆ ಮಡಿಲಿನಿಂದ ಮತ್ತೆ ಇಪ್ಪತ್ತೈದನ್ನು ತೆಗೆದು ಮುಂದಿಟ್ಟಳು. ಅವರು ‘ಸಾಧ್ಯವಿಲ್ಲ’ ಎಂದುದನ್ನು ಕೇಳಿ ಮತ್ತೆ ಐವತ್ತನ್ನು ಹೊರತೆಗೆದು ಅವರ ಮುಂದಿಟ್ಟಳು. ರಾಘವೇಂದ್ರರು ಮುಖವನ್ನು ಗಂಟುಹಾಕಿಕೊಂಡು ‘ಇಷ್ಟರಿಂದ ಮಠ ಕಟ್ಟುವುದಕ್ಕೂ ಸಾಧ್ಯವಿಲ್ಲ, ಅದಕ್ಕಾಗಿ ತಾನು ಇಲ್ಲಿ ನಿಲ್ಲುವುದೂ ಸಾಧ್ಯವಿಲ್ಲ. ನೀನು ಇಲ್ಲಿಂದ ಹೊರಡು’ ಎಂದು ಗದರಿದರು. ನಡುಗಿ ಹೋದ ಮುದುಕಿ ತಟ್ಟೆಯನ್ನು ಎತ್ತಿಕೊಂಡು ಹೊರಗೆ ಬಂದಳು. ಮನೆಯ ಒಳಗೆ ಮತ್ತೆ ಗುಸುಗುಸು. ಸ್ವಲ್ಪ ಹೊತ್ತು ನಿಶ್ಶಬ್ದ, ಮತ್ತೆ ಗುಸುಗುಸು. ಸಂಕಜ್ಜಿ ತಟ್ಟೆಯನ್ನು ಹಿಡಿದು ಮತ್ತೆ ಒಳಗೆ ಬಂದಳು. ನಡುಗುವ ದನಿಯಲ್ಲಿ ಆಕೆ ‘ಅಪ್ಪಯ್ಯ ಸಿಟ್ಟಾಗಬೇಡಿ. ಇಗೋ ನನ್ನ ಜೀವಮಾನದಲ್ಲಿ ಕೂಡಿಟ್ಟಿರುವ ಈ ಐದುನೂರು ರೂಪಾಯಿಗಳನ್ನೂ ನಿಮ್ಮ ಪಾದಕ್ಕೆ ಒಪ್ಪಿಸುತ್ತಿದ್ದೇನೆ. ಇಷ್ಟೇ ಅಲ್ಲ ನನ್ನ ಮನೆ, ನನ್ನ ಒಡವೆ ವಸ್ತ್ರ, ಸಾಮಾನು-ಸರಂಜಾಮು – ಎಲ್ಲವನ್ನೂ ನಿಮಗೆ ಒಪ್ಪಿಸುತ್ತೇನೆ. ನೀವು ಇಲ್ಲಿಂದ ಹೋಗಬೇಡಿ. ಇಲ್ಲೇ ಇದ್ದು ಮಠ ಕಟ್ಟಿಸಿರಿ’ ಎಂದು ಹೇಳಿ ಮತ್ತೊಮ್ಮೆ ಅಡ್ಡ ಬಿದ್ದಳು. ಆಕೆಯ ದೃಢ ಭಕ್ತಿ, ಔದಾರ್ಯ, ತ್ಯಾಗಗಳನ್ನು ಕಂಡು ಶ್ರೀ ರಾಘವೇಂದ್ರರ ಹೃದಯ ಕರಗಿತು. ಅವರು ‘ಆಗಲಿ ತಾಯಿ’ ಎಂದರು.

ಶ್ರೀ ರಾಘವೇಂದ್ರರ ಬಾಯಿಂದ ‘ಆಗಲಿ’ ಎಂಬ ಮಾತು ಹೊರ ಬರುತ್ತಿದ್ದಂತೆ ಹೊರಗಡೆ ದೊಡ್ಡ ಕೋಲಾಹಲ. ತಾವು ಮುಂದೆ ಬಂದು ಅವರ ಪ್ರಯಾಣವನ್ನು ನಿಲ್ಲಿಸಲು ಹೆದರಿದ್ದ ಊರ ಪ್ರಮುಖರು ಸಂಕಜ್ಜಿಯನ್ನು ಹುರಿದುಂಬಿಸಿ ಮುಂದೆ ಬಿಟ್ಟಿದ್ದರು. ತಮ್ಮ ಕಾರ್ಯಸ್ಥಾನ ಸಫಲವಾಗುತ್ತಲೇ ಅವರು ಹಿಂದಿನಿಂದ ಬೋಬ್ಬಿರಿದರು. ಮುಂದೆ ಹತ್ತು ನಿಮಿಷಗಳು ಕಳೆಯುವಷ್ಟರಲ್ಲಿ ಅವರು ಮಂಗಳ ವಾದ್ಯದೊಡನೆ ಪರಪ್ಪಸ್ವಾಮಿಯ ಪಲ್ಲಕ್ಕಿಯನ್ನು ಅಲ್ಲಿಗೆ ತಂದರು. ತಮ್ಮ ಮೆಚ್ಚಿನ ‘ಅಯ್ಯಪ್ಪ’ನನ್ನು ಮುಂದೆ ಮಾಡಿಕೊಂಡು ಊರಲ್ಲೆಲ್ಲ ಮೆರವಣಿಗೆ ನಡೆಸಿದರು. ತಮ್ಮ ಪಾಲಿನ ಭಾಗ್ಯದೇವತೆಯಂತಿದ್ದ ‘ಚಡ್ಡಿ ಬಾಬು’ಮಲ್ಲಾಡಿ ಹಳ್ಳಿಯಲ್ಲಿಯೇ ಇನ್ನು ಕೆಲವು ಕಾಲ ನಿಲ್ಲುವಂತಾದುದಕ್ಕೆ ಅವರಿಗೆ ಹಿಗ್ಗೋ ಹಿಗ್ಗು.
ಶ್ರೀ ರಾಘವೇಂದ್ರರು ಪರಪ್ಪಸ್ವಾಮಿಯ ಮಠವನ್ನು ಕಟ್ಟಿಸುವುದಾಗಿ ಸಂಕಜ್ಜಿಗೆ ಮಾತುಕೊಟ್ಟು ಮಲ್ಲಾಡಿಹಳ್ಳಿಯಲ್ಲಿ ಉಳಿದುದು ಆ ಊರಿನ ಅದೃಷ್ಟ. ಅವರು ಆ ಕಾರ್ಯವನ್ನು ಸಾಂಗಗೊಳಿಸಲೆಂದು ಹಂಚಿಕೆಯನ್ನು ಹಾಕಿಕೊಳ್ಳುವಷ್ಟರಲ್ಲಿ ಕಾಲರಾ ಕಾಣಿಸಿಕೊಂಡಿತು, ಅಲ್ಲಿ. ಒಡನೆಯೇ ಶ್ರೀ ರಾಘವೇಂದ್ರರ ವೈದ್ಯ ವಿದ್ಯೆ ಊರಿನ ರಕ್ಷಣೆಗಾಗಿ ಮೈ ಕೊಡವಿಕೊಂಡು ಮೇಲೆದ್ದಿತು. ಅಂಟುರೋಗಕ್ಕೆ ಹೆದರಿ ಹತ್ತಿರದ ನೆಂಟರು ಕೂಡಾ ದೂರ ಸರಿಯುತ್ತಿದ್ದರು. ಊರಿನ ಹರಿಜನರ ಸ್ಥಿತಿಯಂತೂ ತುಂಬಾ ಕರುಣಾಜನಕವಾಗಿತ್ತು. ಸವರ್ಣೀಯರಾರೂ ಅವರ ಕೇರಿಗೆ ಹೋಗರು. ರೋಗ ಶಮನಕ್ಕೆ ಗತ್ಯವೆನಿಸಿದ ಮಜ್ಜಿಗೆಯನ್ನು ಅವರಿಗೆ ಕೊಡರು. ಇದನ್ನು ಕಂಡು ಶ್ರೀ ರಾಘವೇಂದ್ರರು ಕಂಗಾಲಾದರು. ಅವರು ರೋಗನಿದಾನಕ್ಕೆಂದು ಹೋದ ಮನೆಗಳಲ್ಲೆಲ್ಲ ಮಜ್ಜಿಗೆಯನ್ನು ಸಂಗ್ರಹಿಸಿದರು, ದೊಡ್ಡದೊಂದು ಡಬ್ಬದಲ್ಲಿ ಅದನ್ನು ತುಂಬಿಕೊಂಡು ತಾವೇ ಹರಿಜನರ ಕೇರಿಗೆ ಹೋದರು, ಎಲ್ಲರಿಗೂ ಅಲ್ಲಿ ಅದನ್ನು ಹಂಚಿದರು, ದಿಕ್ಕಿಲ್ಲದೇ ಬಿದ್ದಿದ್ದ ರೋಗಿಗಳನ್ನು ತೊಡೆಯಮೇಲೆ ಹಾಕಿಕೊಂಡು ಔಷಧವನ್ನು ಕುಡಿಸಿದರು, ಅಕ್ಕಪಕ್ಕದಲ್ಲಿ ಅವರು ಮಾಡಿಕೊಂಡಿದ್ದ ವಾಂತಿ, ಭೇದಿಗಳನ್ನು ಎತ್ತಿಹಾಕಿ ಶುದ್ಧಿಗೊಳಿಸಿದರು, ಅವರಿಗೆ ಪಥ್ಯ ಪಾನೀಯಗಳನ್ನು ಒದಗಿಸಿದರು. ಆ ಸಮಯದಲ್ಲಿ ವಿರಾಟ್ ರೂಪವನ್ನು ಧರಿಸಿದವರಂತೆ ಎಲ್ಲೆಲ್ಲಿಯೂ ಶ್ರೀ ರಾಘವೇಂದ್ರರೇ. ಸವರ್ಣೀಯರಿಗೆ ಅಪ್ಪಯ್ಯ, ಹರಿಜನರಿಗೆ ಸಾಕ್ಷಾತ್ ದೇವರು, ಮಹಮದೀಯರಿಗೆ ‘ಮುಲ್ಲಾ’. ಅಂದು ಅವರು ಮಾಡಿದ ಜನಸೇವೆ ಇಂದಿಗೂ ಜನರ ಬಾಯಲ್ಲಿ ಕಥೆಯ ರೂಪವನ್ನು ತಾಳಿ ಉಳಿದಿದೆ.

ಈ ಸುಮಾರಿನ ದಿನಗಳಲ್ಲಿಯೇ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಪಟ್ಟಶಿಷ್ಯರಾದ ಶ್ರೀ ಸೂರದಾಸಜೀ ಅವರು ತಮ್ಮ ವ್ಯಕ್ತಿತ್ವವನ್ನೇ ಗುರುಗಳ ಧರ್ಮಯಜ್ಞಕ್ಕಾಗಿ ಸಮರ್ಪಿಸಿದುದು. ಗಂಗೆಯೊಡನೆ ಯಮುನೆಯ ಸಂಗಮವಾಗಿ ಹೋಯಿತು. ಬಡ ಕುಟುಂಬವೊಂದರಲ್ಲಿ ಹಿರಿಯ ಮಗನಾಗಿ ಹುಟ್ಟಿದ್ದ ಸೂರಪ್ಪ ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವನ್ನು ಬೆಳೆಸಿಕೊಂಡಿದ್ದವನು. ವಿದ್ಯಾರ್ಥಿ ದೆಸೆಯಿಂದಲೂ ಯೋಗಾಸನ, ಪ್ರಾಣಾಯಾಮ, ಜಪ, ತಪ, ಧ್ಯಾನಗಳಲ್ಲಿ ಮುಳುಗಿರುತ್ತಿದ್ದವನು-ಸಂತರು, ಸಾಧು ಸಜ್ಜನರಲ್ಲಿ ಭಕ್ತಿಯುಕ್ತನಾಗಿರುತ್ತಿದ್ದವನು. ಸಂಸಾರ ತಾಪತ್ರಯಕ್ಕೆ ಸಿಕ್ಕಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಯುತ್ತಲೇ ಉಪಾಧ್ಯಾಯ ವೃತ್ತಿಯನ್ನು ಕೈಗೊಂಡಿದ್ದವನು. ಆತ ಶ್ರೀ ರಾಘವೇಂದ್ರರ ಪ್ರದರ್ಶನವೊಂದರಲ್ಲಿ, ಅವರ ಅಸಾಧಾರಣವಾದ ದೇಹಶಕ್ತಿ, ಆಧ್ಯಾತ್ಮ ಶಕ್ತಿ, ಲೋಕಸೇವಾಸಕ್ತಿಗಳನ್ನು ಕಂಡು ಮಾರು ಹೋದವನು. ಹೇಗಾದರೂ ಮಾಡಿ ಅವರ ಶಿಷ್ಯವೃತ್ತಿಯನ್ನು ಸಂಪಾದಿಸಬೇಕು, ಅವರ ಅನುಗ್ರಹದಿಂದ ಅವರ ವಿದ್ಯೆಯನ್ನೆಲ್ಲ ತಾನು ಹೀರಿಕೊಳ್ಳಬೇಕು-ಎಂಬ ಗೀಳು ಹಿಡಿಯಿತು. ಎಲ್ಲಿ ಅವರ ಪ್ರದ್ರ್ಷನ ನಡೆದರೂ ಅಲ್ಲಿಗೆ ತಪ್ಪದೇ ಹಾಜರಾಗುತ್ತಿದ್ದನು. ಶ್ರೀ ರಾಘವೇಂದ್ರರನ್ನು ಮಲ್ಲಾಡಿಹಳ್ಳಿಗೆ ಬರಮಾಡಿಕೊಳ್ಳುವುದರಲ್ಲಿ ಆತನ ಕೈವಾಡವೂ ಇತ್ತು. ಆಗ ಆತ ನೆಲಸಿದ್ದುದೂ ಅಲ್ಲಿಯೇ. ಆತ ಆಗಾಗ ಅವರ ಬಳಿಗೆ ಹೋಗಿ ಸಾಧ್ಯವಾದಷ್ಟು ಅವರ ಸಹವಾಸದಲ್ಲಿ ಕಾಲ ಕಳೆಯುತ್ತಿದ್ದನು. ಅವರ ಸೇವೆ ಮಾಡುವುದಕ್ಕೆ, ಅವರನ್ನು ಸಂತೋಷ ಪಡಿಸುವುದಕ್ಕೆ ಅವಕಾಶ ಕಲ್ಪಿಸಿಕೊಳ್ಳುತ್ತಿದ್ದನು. ಹೀಗೆಯೇ ಬರಬರುತ್ತಾ ಆತನು ಅವರ ಛಾಯಾನುವರ್ತಿಯಾದನು, ಪವಿತ್ರವಾದ ಛಾಯೆಯೇ ಆಗಿಹೋದನು. ಮನೆ, ಮಠ, ಬಂಧು-ಬಳಗ,ನೌಕರಿ ಎಲ್ಲವೂ ಇದ್ದೂ ಇಲ್ಲದಂತಾದವು. ಇದರಲ್ಲಿ ಆಶ್ಚರ್ಯಕ್ಕೆ ಕಾರಣವೇನೂ ಇಲ್ಲ. ಈ ಗುರು-ಶಿಷ್ಯರ ಸಂಬಂಧ ಒಂದು ಅಲೌಕಿಕವಾದ ಅವಿನಾ ಸಂಬಂಧ. ಇದು ಕೇವಲ ಈ ಜನ್ಮದ್ದು ಮಾತ್ರವಲ್ಲ; ಬಹುಶ: ಅನಾದಿ, ಅನಂತ. ಯಾವ ಸತ್ ಚಿತ್ ಆನಂದ ಶಕ್ತಿ ಶ್ರೀ ರಾಮಾವತಾರಿಯಾದಾಗ ತನ್ನ ಕಾರ್ಯಪೂರ್ಣತೆಗಾಗಿ ಆಂಜನೇಯನನ್ನು ಪಡೆಯಿತೋ, ಶ್ರೀಕೃಷ್ಣ ರೂಪವನ್ನು ಧರಿಸಿದಾಗ ಅರ್ಜುನನ್ನು ಅಳವಡಿಸಿಕೊಂಡಿತೋ, ಶ್ರೀ ರಾಮಕೃಷ್ಣ ಪರಮಹಂಸರಾಗಿ ಜನಿಸಿದಾಗ ಶ್ರೀ ವಿವೇಕಾನಂದರನ್ನು ಆಯ್ದುಕೊಂಡಿತ್ತೋ ಅದೇ ವಿಶ್ವಶಕ್ತಿ ಶ್ರೀ ರಾಘವೇಂದ್ರರೂಪಿಯಾಗಿರುವಾಗ ಶ್ರೀ ಸೂರದಾಸಜೀಯವರನ್ನು ವರಿಸಿತೆಂದು ತೋರುತ್ತದೆ. ಇಲ್ಲದಿದ್ದರೆ ಈ ಎರಡು ಚೇತನಗಳಿಗೆ ಇಂತಹ ಏಕತಾನತೆ ಹೇಗೆ ಸಾಧ್ಯ? ಒಂದು ಮೂಲಮೂರ್ತಿ, ಮತ್ತೊಂದು ಉತ್ಸವಮೂರ್ತಿ. ಬೆಳಕು ಕಾವುಗಳು ಸೇರಿ ಸೂರ್ಯಕಾಂತಿಯಾಗುವಂತೆ, ಸತ್ವ-ಕ್ಷಾತ್ರ ಗುಣಗಳು ಸೇರಿ ಕ್ರತುಶಕ್ತಿ ಉದಿಸುವಂತೆ ಈ ಮಹಾಪುರುಷರಿಬ್ಬರ ಸಮ್ಮಿಲದಿಂದ ಮಹತ್ ಕಾರ್ಯವೊಂದು ನೆರವೇರುತ್ತಿದೆ. ಭಗವತ್ ಸಂಕಲ್ಪದಿಂದ ಈಗ ಮೂವತ್ತೈದು ವರ್ಷಗಳ ಕೆಳಗೆ ಅನಾಥ ಸೇವಾಶ್ರಮ ಅಂಕುರಿಸಿದಾಗ ಶ್ರೀ ಶ್ರೀ ರಾಘವೇಂದ್ರರು ಅದರ ಸಂಸ್ಥಾಪಕ ಅಧ್ಯಕ್ಷರಾದರು; ಶ್ರೀ ಸೂರದಾಸರು ಅದರ ಸಂಸ್ಥಾಪಕ ಕಾರ್ಯದರ್ಶಿಯಾದರು.

ಕಾಲರಾ ರೋಗ ನಿಂತು ಶ್ರೀ ರಾಘವೇಂದ್ರರ ದೃಷ್ಟಿ ಪರಪ್ಪಸ್ವಾಮಿಯ ಮಠದತ್ತ ಹೊರಳುವಷ್ಟರಲ್ಲಿ ಶಿವರಾತ್ರಿ ಸನ್ನಿಹಿತವಾಯಿತು. ಮೃತ್ಯುವಿನಿಂದ ತಮ್ಮಾನ್ನು ಉದ್ಧರಿಸಿದ ಮೃತ್ಯುಂಜಯನನ್ನು ಭಕ್ತಿಯಿಂದ ಪೂಜಿಸಲು ಊರಿಗೆ ಊರೇ ಅಣಿಯಾಯಿತು. ಶ್ರೀ ರಾಘವೇಂದ್ರರ ಅದರ ಅಧ್ವರ್ಯುವಾಗಿ ನಿಂತರು. ಅವರ ಪ್ರಾರ್ಥನೆಯನ್ನು ನಿರಾಕರಿಸಲಾರದೆ ಶ್ರೀ ಶಂಕರಲಿಂಗ ಭಗವಾನನರೂ ಆ ಉತ್ಸವಕ್ಕೆ ದಯಮಾಡಿಸಿದರು. ಅವರ ನಿರ್ದೇಶನದಂತೆ ಶಿವರಾತ್ರೆಯ ಸಪ್ತಾಹ ಸಾಂಗವಾಗಿ ನೆರವೇರಿತು. ಹಿಂದೆಂದೂ ಅಂತಹ ವೈಭವವನ್ನು ಕಾಣದಿದ್ದ ಜನ ವರ್ಷವರ್ಷವೂ ಇಂತಹ ಉತ್ಸವ  ನಡೆಸುದರೆ ಎಷ್ಟು ಚೆನ್ನ ಎಂದುಕೊಂಡರು. ಬಗೆ ಬಗೆಯ ಬಿಡಿ ಹೂಗಳನ್ನು ಹೊಂದಿಕೆಯಾಗಿ ಜೋಡಿಸುವ ಕಲಾವಿದನಿದ್ದರೆ ತಾನೇ ಸುಂದರವಾದ ತುರಾಯಿಯಾಗುವುದು? ಊರ ಜನ ಶಂಕರ ಲಿಂಗ ಭಗವಾನರಲ್ಲಿ ತಮ್ಮ ಆಶೆಯನ್ನು ನಿವೇದಿಸಿಕೊಂಡರು. ಅವರು ತಮ್ಮ ‘ಹನುಮಂತರಾಯ’ನನ್ನು ಕೇಳಿದರು-‘ಏನಯ್ಯಾ ಕಪಿರಾಯ, ಈ ಸಪ್ತಾಹವನ್ನು ಇಲ್ಲಿಗೆ ಮುಗಿಸುತ್ತೀಯೋ, ಮುಂದುವರಿಸುತ್ತೀಯೋ?’ ಆತ ತಮ್ಮ ‘ಅಪ್ಪಯ್ಯ’ನಿಗೆ ಹೇಳಿದರು- ‘ನಿನ್ನ ತಲೆ ! ಸಪ್ತಾಹ ಎಂದರೆ ಏಳು ವರ್ಷಗಳ ಕಾಲ ಏಳೇಳು ದಿನಗಳು ಆಚರಿಸಬೇಕು. ನೀನು ನನಗಿನ್ನು ಎದುರು ಉತ್ತರ ಕೊಡಬೇಡ. ಇನ್ನು ಏಳು ವರ್ಷ ನೀನು ಇಲ್ಲಿಯೇ ಇರು. ಆಮೇಲೆ ಏನಾಗುತ್ತದೋ ನೋಡೋಣ’ ಎಂದರು. ಶ್ರೀ ರಾಘವೇಂದ್ರರ ಪುಂಗಿ ಬಂದಾಗಬೇಕಾಯಿತು. ಅವರು ಕೈಗೊಳ್ಳಬೇಕಿದ್ದ ಹಿಮಾಲಯ ಯಾತ್ರೆ ಅನಿರ್ಧಿಷ್ಟ ಕಾಲಕ್ಕೆ ಮುಂದುವರಿಯಿತು.

ಈ ಶಿವರಾತ್ರಿಯಕಾಲದಲ್ಲಿಯೆ, ಎಂದರೆ ಶಾಲಿವಾಹನ ಶಕ 1864  ಚಿತ್ರಭಾನು ಸಂವತ್ಸರ (ಕ್ರಿ.ಶ. 1943)ದ ಶಿವರಾತ್ರಿಯ ದಿನಪರಪ್ಪಸ್ವಾಮಿಯ ಮಠಕ್ಕೆ ಗುದ್ದಲಿ ಪೂಜೆ ನಡೆಯಿತು. ಅಂದೇ ಕನ್ನಡ ನಾಡಿನ ಅದೃಷ್ಟ ದೇವತೆ ಅನಾಥ ಸೇವಾಶ್ರಮದ ಸ್ಥಾಪನೆಗೂ ಸ್ವಸ್ತಿ ವಾಚನವನ್ನು ಹಾಡಿದಳೆಂದು ತೋರುತ್ತದೆ. ಅದರ ಜೊತೆಯಲ್ಲಿಯೇ ‘ಅಕ್ಷಯಮಸ್ತು’ ಎಂದೂ ಹರಸಿರಬೇಕು.

Previous…

Next…