ಅವರು ಕಾರ್ಯರಂಗಕ್ಕೆ ಇಳಿದಂದು ಅವರಿಗಿದ್ದ ಭೌತಿಕ ಆಸ್ತಿಯೆಂದರೆ ಕೇವಲ ಒಂದು ಜೋಳಿಗೆ, ಮೊಟ್ಟ ಮೊದಲ ಬಾರಿಗೆ ಅದನ್ನು ಕೈಲಿ ಹಿಡಿದು ‘ಸಪ್ತಾಕ್ಷರೀ ಮಂತ್ರ’ವನ್ನು ಜಪಿಸುತ್ತಾ ಸುತ್ತಮುತ್ತಿನ ಹತ್ತಾರು ಹಳ್ಳಿಗಳಲ್ಲಿ ತಿರುಗಿದರು. ತಕ್ಕಷ್ಟು ಧನಸಂಗ್ರಹಾವಾಯಿಯು. ಮಲ್ಲಾಡಿಹಳ್ಳಿಯು ಜನಬಲವನ್ನು ಒದಗಿಸಿತು. ಹೆಣ್ಣು-ಗಂಡುಗಳೊಂದಾಗಿ ಶ್ರೀ ರಾಘವೇಂದ್ರರೊಡನೆ ಭಜನೆ ಮಾಡುತ್ತಾ ಹತ್ತಿರದ ಹಳ್ಳದಿಂದ ನೀರು ಹೊತ್ತರು; ಹಾಗೆಯೇ ಭಜನೆ ಮಾಡುತ್ತಾ ಮಾಡುತ್ತಾ ಕಲ್ಲು ಇಟ್ಟಿಗೆಗಳನ್ನು ಹೊತ್ತು ಸಾಗಿಸಿದರು; ಗಾರೆಯನ್ನೂ ಕಲಸಿದರು, ಕಟ್ಟಡ ಕಟ್ಟಲು ಸಹಾಯ ಮಾಡಿದರು. ನೋಡನೋಡುತ್ತಿರುವಂತೆಯೇ ಕಟ್ಟಡ ಮೇಲೆದ್ದು ಮಠ ಸಿದ್ಧವಾಯಿತು. ಶುಭದಿನ ಶುಭ ಮುಹೂರ್ತದಲ್ಲಿ ಪರಪ್ಪ ಸ್ವಾಮಿಯು ಗದ್ದುಗೆ, ಅದರಮೇಲೆ ಅವರ ಚಿತ್ರಪಟ ಸ್ಥಾಪನೆಯಾದವು.
ಇಲ್ಲಿಂದ ಮುಂದೆ ಪ್ರತಿ ವರ್ಷವೂ ನಡೆಯುತ್ತಿದ್ದ ಶಿವರಾತ್ರಿ ಉತ್ಸವದ ವರ್ಣನೆ ಕೇಳಿದವರ ಬಾಯಲ್ಲಿ ನೀರೂರುವಷ್ಟು ರಸವತ್ತಾಗಿದೆ. ಹಬ್ಬ ಇನ್ನೂ ಹದಿನೈದು ದಿನಗಳಿರುವಾಗಲೇ ಊರಿನಲ್ಲೆಲ್ಲ ಸಡಗರೋವೋ ಸಡಗರ. ಆಗಿನ್ನೂ ಈಗಿರುವಂತೆ ಆಶ್ರಮ ಬೆಳೆದು ಎಲ್ಲೆಲ್ಲೂ ಕಟ್ಟಡಗಳಾಗಿರಲಿಲ್ಲ. ಸುಮಾರು ಹತ್ತು ಎಕರೆಗಳಷ್ಟು ವಿಸ್ತಾರವಾದ ಜಾಗ ಬಟಾ ಬಯಲಾಗಿತ್ತು. ಊರಿನ ಗಂಡಸರೆಲ್ಲ ಗುದ್ದಲಿ, ಸಲಿಕೆಗಳನ್ನು ಹಿಡಿದು, ಆ ಬಯಲಿನಲ್ಲಿ ಮುಳ್ಳುಗಿಡಗಳನ್ನೆಲ್ಲ ಸವರಿ, ತಗ್ಗುದಿಣ್ಣೆಗಳನ್ನು ಸಮ ಮಾಡಿದರು; ವಿಸ್ತಾರವಾದ ಆ ಬಯಲೆಲ್ಲ ಮುಚ್ಚಿಹೋಗುವಂತೆ ಹಸಿರು ವಾಣಿಯ ಚಪ್ಪರವನ್ನು ನಿರ್ಮಿಸಿ, ಅದನ್ನು ತಳಿರು ತೋರಣಗಳಿಂದ ಅಲಂಕರಿಸಿದರು. ಹೆಂಗಸರು ನೆಲವನ್ನೆಲ್ಲ ಸ್ವಚ್ಛವಾಗಿ ಗುಡಿಸಿ, ಸೆಗಣಿ ಹಚ್ಚಿ ಸಾರಿಸಿ ರಂಗವಲ್ಲಿಯನ್ನು ಇಕ್ಕಿದರು. ಬಿದಿರಿ ತಟ್ಟಗಳನ್ನು ಕಟ್ಟಿದ ಹತ್ತಾರು ಪಾಕಶಾಲೆಗಳೂ, ಅವುಗಳಿಗೆ ಹೊಂದಿಕೊಂಡಂತೆ ಭೋಜನಶಾಲೆಗಳೂ ನಿರ್ಮಾಣವಾದವು. ಸುತ್ತಮುತ್ತಿನ ಗ್ರಾಮಗಳಿಗೆಲ್ಲ ಉತ್ಸವಕ್ಕೆ ಬರುವಂತೆ ಆಹ್ವಾನ ಹೋಯಿತು. ಈ ಆಹ್ವಾನವನ್ನು ಸ್ವೀಕರಿಸಿದವರು ಧನ, ಧಾನ್ಯ, ತೆಂಗಿನಕಾಯಿ, ತರಕಾರಿ, ಬೆಲ್ಲ-ಬೇಳೆಗಳು, ಹಣ್ಣು-ಹಂಪಲು, ಹಾಲು-ಮೊಸರು ಇತ್ಯಾದಿಗಳನ್ನು ಗಾಡಿಗಳಲ್ಲಿ ತುಂಬಿ ಕಳುಹಿಸಿದರು. ಇದರಿಂದ ಉಗ್ರಾಣ ತುಂಬಿ ತುಳುಕಿತು. ನೂರಾರು ಜನ ಕೈಗೆ ಸಿಕ್ಕು ಪಾತ್ರೆ-ಪರಡಿಗಳನ್ನು ಹಿಡಿದು, ಹತ್ತಿರದ ಹಳ್ಳಕ್ಕೆ ಹೋಗಿ, ಒರತೆಗಳನ್ನು ನೋಡಿ ನೀರನ್ನು ತುಂಬಿ ತಂದು ಹತ್ತಿರದಲ್ಲಿದ್ದ ಬಾವಿಯನ್ನು ತುಂಬಿಸಿದರು. ಅದೇ ನೀರನ್ನು ಶೇಕರಿಸುವ ತೊಟ್ಟ. ಇಗೋ ಎನ್ನುವಷ್ಟರಲ್ಲಿ ಶಿವರಾತ್ರಿ ಬಂದೇಬಿಟ್ಟಿತು. ಅಂದು ಮುಂಜಾನೆಯ ಹೊತ್ತಿಗೆ ಹಳ್ಳಿಹಳ್ಳಿಯಿಂದಲೂ ತಾಳಮೇಳಗಳೊಡನೆ ಭಜನೆಯ ತಂಡಗಳು ಆಗಮಿಸಿದವು. ಶ್ರೀ ರಾಘವೇಂದ್ರರು ಅವರನ್ನು ಇದಿರುಗೊಂಡು, ಪರಪ್ಪ ಸ್ವಾಮಿಯ ಮಠದ ಬಳಿಗೆ ಕರೆದೊಯ್ದರು. ಶ್ರೀ ಶಂಕರಲಿಂಗ ಭಗವಾನರ ನೇತೃತ್ವದಲ್ಲಿ ಆ ತಂಡದವರು ಏಳು ದಿನಗಳ ಅಖಂಡ ಭಜನೆಯನ್ನು ಮೊದಲು ಮಾಡಿದರು. ಜನರು ಊರೂರುಗಳಿಂದ ಗಾಡಿಗಳಲ್ಲಿ, ಕಾಲ್ನೆಡಿಗೆಯಲ್ಲಿ ತಂಡ ತಂಡವಾಗಿ ಬಂದು ಸೇರಲು ಪ್ರಾರಂಭವಾಯಿತು. ಸಾವಿರ, ಎರಡು ಸಾವಿರ, ಹತ್ತು ಸಾವಿರ, ಇಪ್ಪತ್ತು ಸಾವಿರ, ಮೂವತ್ತು ಸಾವಿರ ಇನ್ನೂ ಬರುತ್ತಲೇ ಇದ್ದಾರ್‍ಎ. ಬಯಲೆಲ್ಲವೂ ಜನಸಮುದ್ರ. ಅಗೋ ಸಿರಿಗೆರೆ ಮಠದ ಆನೆ ಬಂದಿತು; ಮುರುಗಿ ಮಠದಿಂದ ಒಂಟೆ ಕುದುರೆಗಳು ಬಂದವು. ಬಯಲ ಕೊನೆಯಲ್ಲಿ ಅಂಗಡಿಗಳ ಸಾಲು; ಆ ಮೂಲೆಯಲ್ಲಿ ರಂಕಲರಾಟೆ, ಇನ್ನೊಂದು ಕೊನೆಯಲ್ಲಿ ಹಾವಾಡಿಗರ ಆಟ, ಮತ್ತೊಂದು ಕಡೆಯಲ್ಲಿ ಡೊಂಬರ ಕುಣಿತ, ಅಗೋ ಅಲ್ಲಿ ಜಟ್ಟಿಗಳ ಕಾಳಗಕ್ಕಾಗಿ ವಿಸ್ತಾರವಾದ ಅಖಾಡ. ಅಡುಗೆಮನೆ ಕಡೆ ಸ್ವಲ್ಪ ತಿರುಗಿ. ಯಾವ ಕೆಲಸಕ್ಕೂ ಯಾರನ್ನೂ ದುಡ್ಡು ಕೊಟ್ಟು ನೇಮಿಸಿಲ್ಲ. ಯಾರಿಗೂ ಯಾವ ಬಲವಂತವೂ ಇಲ್ಲ. ತಾವಾಗಿಯೇ ಅಹಮಹಿಮಿಕೆಯಿಂದ ಮುಂದೆಬಿದ್ದು ಸೇವೆಗಾಗಿ ಸೊಂಟಕಟ್ಟಿ ನಿಂತಿರುವ ಜನ, ಅಲ್ಲಿ. ಅದೊಂದು ಜೇನುಗೂಡು; ಯಾರೋ ಹತ್ತು ಜನ ಒಲೆ ಹಚ್ಚಿದರು, ಮತ್ತಾರೋ ಹತ್ತುಜನ ನೀರು ತಂದು ಕೊಪ್ಪರಿಗೆಗಳಲ್ಲಿ ಸುರಿದರು, ಇನ್ನಾರೋ ಹಲವರು ಸೌಟುಗಳನ್ನು ಹಿಡಿದು ನಿಂತರು, ಹಲವಾರು ಜನ ಗಂಡು ಹೆಣ್ಣುಗಳು ತರಕಾರಿ ಹೆಚ್ಚಿದರು, ಕಾಯಿ ತುರಿದರು, ಖಾರ ರುಬ್ಬಿದರು. ಎಲ್ಲರ ಮುಖದಲ್ಲಿಯೂ ಮಗನ ಮದುವೆ ಮಾಡುತ್ತಿರುವಷ್ಟು ಉತ್ಸಾಹ, ಲವಲವಿಕೆ. ಈ ಜನಜಂಗುಳಿಯಲ್ಲಿ ಶ್ರೀ ರಾಘವೇಂದ್ರರು ಎಲ್ಲಿ? ಎಲ್ಲಿಯೇ? ಎಲ್ಲೆಲ್ಲಿಯೂ ಅವರೆ. ಏಕ ವಸ್ತ್ರಧಾರಿಯಾದ ಅವರು ಈಗ ಉಗ್ರಾಣದಲ್ಲಿ, ಮರು ನಿಮಿಷ ಪಾಕಶಾಲೆಯಲ್ಲಿ; ಅಗೋ ಯಾರೋ ಅತಿಥಿಗಳು ಬಂದರೆಂದು ಕಾಣುತ್ತದೆ, ಅವರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಿದ್ದಾರೆ; ಇದೇನು, ಈ ಮನುಷ್ಯನಿಗೆ ರೆಕ್ಕೆಗಳೇನಾದರೂ ಇದೆಯೋ? ಆ ಅಖಾಡದ ಬಳಿಯಲ್ಲಿ ಯಾವನೋ ಜಟ್ಟಿಯೊಡನೆ ಯೇನೋ ಮಾತನಾಡುತ್ತಿದ್ದಾರೆಯಲ್ಲ, ಬಹುಶಃ ಯಾವುದೋ ಕುಸ್ತಿಯ ಪಟ್ಟವನ್ನು ಆತನಿಗೆ ಹೇಳಿಕೊಡುತ್ತಿರಬಹುದು; ಈಗ ಶಿಷ್ಯ ಸೂರದಾಸಜೀಯವರಿಿಗೆ ಏನೋ ಹೇಳುತ್ತಿದ್ದಾರೆ; ಎಲೆಗಳ ಕಟ್ಟನ್ನು ತರುತ್ತಿದ್ದಾರೆ, ಬಡಿಸಲು ಹೊರಟಿದ್ದಾರೆ, ಚಪ್ಪಾಳೆ ತಟ್ಟುತ್ತಾ ಭಜನೆಯ ಗುಂಪಿನಲ್ಲಿ ಸೇರಿಕೊಂಡಿದ್ದಾರೆ, ಕೌರವನ ಆಸ್ಥಾನದಲ್ಲಿ ಕಾಣಿಸಿಕೊಂಡ ಶ್ರೀಕೃಷ್ಣನಂತೆ ಅವರು ಹಲವು ರಾಘವೇಂದ್ರರ ರೂಪವನ್ನು ತಳೆದಿದ್ದರೋ ಏನೋ! ಶಿವರಾತ್ರಿಯ ಉತ್ಸವವೆಂದರೆ ಈ ಊಟ, ತಿಂಡಿ, ವಿನೋದ-ಇಷ್ಟೇನೆ? ಎಂದು ಭಾವಿಸುವುದು ಬೇಡ. ಸಪ್ತಾಹದ ಒಂದೊಂದು ದಿನವೂ ಒಬ್ಬೊಬ್ಬ ಮಠಾಧೀಶರು ಬಂದ ಜನರನ್ನು ಆಶೀರ್ವದಿಸುತ್ತಿದ್ದರು. ಏಳು ದಿನಗಳೂ ಪರಪ್ಪ ಸ್ವಾಮಿಯ ಪೋಜೆ, ಮಂಗಳಾರತಿ, ಅಖಂಡ ಭಜನೆಗಳ ಜೊತೆಗೆ ಬೆಳಗಿನ ಹೊತ್ತು ವಿದ್ವಾಂಸರಿಂದ ಪುರಾಣ ಶ್ರವಣ, ಮಧ್ಯಾಹ್ನ ಸಾಧು ಸಜ್ಜನರಿಂದ ಧರ್ಮ ಪ್ರವಚನ, ಸಂಜೆ ಕೀರ್ತನಕಾರರಿಂದ ಹರಿಕಥೆ, ಶಿವಕಥೆಗಳು, ರಾತ್ರಿ ಶ್ರೀ ರಾಘವೇಂದ್ರ ರಚಿತವಾದ ಪೌರಾಣಿಕ ಮತ್ತು ಧಾರ್ಮಿಕ ನಾತಕಗಳ ಪ್ರದರ್ಶನ. ಇವುಗಳ ಮಧ್ಯೆ ಕೋಲಾಟ, ಕುಸ್ತಿ, ವ್ಯಾಯಾಮ ಪ್ರದರ್ಶನ; ಏಳು ದಿನಗಳೂ ಏಳು ಘಳಿಗೆಗಳಂತೆ ಕಳೆದು ಹೋಗುತ್ತಿದ್ದವು. ಈ ಜಾತ್ರೆಯ ಒಂದು ವಿಶೇಷವೆಂದರೆ ಅಷ್ಟು ಸಹಸ್ರ ಸಹಸ್ರ ಸಂಖ್ಯೆಯ ಜನ ಸೇರಿದರೂ ಯಾವುದೊಂದು ಗಲಭೆಯೂ ನಡೆಯುತ್ತಿರಲಿಲ್ಲ, ಯಾರ ಒಂದು ಕಾಸಿನ ವಸ್ತುವೂ ಕಳವಾಗುತ್ತಿರಲಿಲ್ಲ, ಎಲ್ಲರೂ ಬಯಲಿನಲ್ಲಿಯೇ ಬಿಡಾರ ಹೂಡಿದ್ದರು.
ಮಲ್ಲಾಡಿಹಳ್ಳಿಯಲ್ಲಿ ಏಳು ವರ್ಷ ನಿಲ್ಲಬೇಕೆಂದಾಗ ‘ನಿಂತೇನು ಮಾಡುವುದು?’ ಎಂಬ ಪ್ರಶ್ನೆ (ವಿಕಟಾಟ್ಟಹಾಸಮಾಡುತ್ತಾ) ಶ್ರೀ ರಾಘವೇಂದ್ರರ ಇದಿರಿನಲ್ಲಿ ಬಂದು ನಿಂತಿತು. ಮಹಾತ್ಮ ಗಾಂಧಿಯವರ ಕರೆಯಂತೆ ದೇಶೋನ್ನತಿಗೆ ಸಾಧಕವಾದ ರಚನಾತ್ಮಕ ಕಾರ್ಯದತ್ತ ಅವರ ಗಮನ ಹರಿಯಿತು. ಸಪ್ತ ವಾರ್ಷಿಕ ಯೋಜನೆಯೊಂದನ್ನು ಕೈಗೊಳ್ಳಬೇಕೆಂದು ಅವರು ನಿಶ್ಚಯಿಸಿದರು. ಅವರಿಗೆ ಮೊಟ್ಟಮೊದಲು ಹೊಳೆದುದು ಒಂದು ವೈದ್ಯ ಶಾಲೆಯ ಸ್ಥಾಪನೆ. ನಾಡಿನ ಬಡುಬಗ್ಗರಿಗೆಲ್ಲ ಉಚಿತವಾಗಿ ವೈದ್ಯ ಸಹಾಯವನ್ನು ಒದಗಿಸಬೇಕು. ಅನಾಥರಾದವರಿಗೆ ಇಲ್ಲಿ ಸೇವೆ ಸಲ್ಲಬೇಕು. ಇದಿಂದು ಅನಾಥಸೇವಾಶ್ರಮವಾಗಬೇಕು. ಅಹುದು ಇಂದಿನಿಂದ ಇದು ‘ಅನಾಥ ಸೇವಾಶ್ರಮ.’ ಇದಕ್ಕೊಂದು ಕಟ್ಟಡವಾಗಬೇಕು. ಅಲ್ಲಿ ಉಚಿತವಾಗಿ ಔಷದೋಪಚಾರಗಳಾಗಬೇಕು, ಇದಕ್ಕೆ ಸೇರಿದಂತೆ ಒಂದು ಋಗ್ಣಾಲಯವಿರಬೇಕು, ಬಂದವರ ಊಟ ಉಪಚಾರಕ್ಕಾಗಿ ಒಂದು ಧರ್ಮಶಾಲೆಯಾಗಬೇಕು. ಇದಕ್ಕೆಲ್ಲ ಹಣ ಬೇಕು. ಹಣಕ್ಕೆ ದಾರಿ? ಭಿಕ್ಷಾಪಾತ್ರೆಯೊಂದೇ. ಹಾಗೆ ಭಿಕ್ಷೆಗೆ ಹೊರಡುವುದೂ ಅಪಮಾನವಲ್ಲವೇ? ಎಂತಹ ಅಪಮಾನ? ತಾನೇನು ಸ್ವಾರ್ಥಕ್ಕಾಗಿ ಬೇಡುತ್ತೇನೆಯೇ? ಜನತಾ ಜನಾರ್ಧನನ ಸೇವೆಗೆಂದು ಹೊರಡುವವನಿಗೆ ಅಹಂಕಾರ ಮಮಕಾರಗಳೇಕೆ? ‘ಅಭೀಃ’ ಎಂಬ ಮಂತ್ರವನ್ನು ಜಪಿಸುತ್ತಾ ಅವರು, ‘ನಡೆಮುಂದೆ, ನಡೆಮುಂದೆ, ನುಗ್ಗಿ ನಡೆಮುಂದೆ’ ಎಂಬ ಆದರ್ಶವನ್ನು ಸ್ವೀಕರಿಸಿ, ಕಾರ್ಯರಂಗಕ್ಕಿಳಿದರು. ಒಂದು ವರ್ಷದೊಳಗಾಗಿ ಚಿಕಿತ್ಸಾಲದ ನಿರ್ಮಾಣವಾಯಿತು. (1945) ಶ್ರೀ ರಾಘವೇಂದ್ರರು ಶಿಷ್ಯ ಸೂರದಾಸರೊಡನೆ ಆಸ್ಪತ್ರೆಯ ಕಟ್ಟಡದಲ್ಲೇ ಬಂದು ನೆಲೆಸಿದರು. ಅಂದು ಅದೇ ಅವರ ವಸತಿ ಗೃಹ, ಅದೇ ಚಿಕಿತ್ಸಾಲಯ, ಅದೇ ಔಷಧಿಗಳ ಕಾರ್ಖಾನೆ, ಅದೇ ಧರ್ಮಶಾಲೆ. ಇಂದು ಚಿಕಿತ್ಸಾಲಯಕ್ಕೆ ಬರುವ ರೋಗಿಗಳ ಸಂಖ್ಯೆ ವರ್ಷಕ್ಕೆ ಮೂವತ್ತು ಸಾವಿರಕ್ಕೂ ಮಿಕ್ಕಿದೆ. ಔಷಧದ ಮೂಲಿಕೆಗಳಿಗಾಗಿ ಮಾಡುವ ವೆಚ್ಚ ಒಂದು ಲಕ್ಷ ರೂಪಾಯಿಗಳಷ್ಟಾಗುತ್ತದೆ. ಪಾಶ್ಚಾತ್ಯ ವೈದ್ಯವಿದ್ಯೆಗೆ ಎಟುಕದ ಎಷ್ಟೋ ರೋಗಿಗಳಿಗೆ ಇಲ್ಲಿ ಪರಿಹಾರ ದೊರೆಯುವುದರಿಂದ ಬೊಂಬಾಯಿ, ಪೂನ, ಮದರಾಸು, ದೆಹಲಿ ಇತ್ಯಾದಿ ದೂರದ ಸ್ಥಳಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ.
ಚಿಕಿತ್ಸಾಲಯ ಸ್ಥಾಪನೆಯಾದ ಮರು ವರ್ಷ ಧರ್ಮಶಾಲೆ (1946) ನಿರ್ಮಾಣವಾಯಿತು. ಅದರ ಮರುವರ್ಷ (1947) ರುಗ್ಣಾಲಯ ಕಾಣಿಸಿಕೊಂಡಿತು. ರೋಗಿಗಳು ಕಾಲ ಕಳೆಯುವುದಕ್ಕಾಗಿ ಒಂದು ಪುಟ್ಟ ವಾಚನಾಲಯವೂ ಹುಟ್ಟಿಕೊಂಡಿತು. ಶ್ರೀ ರಾಘವೇಂದ್ರರಿಗೆ ದೈಹಿಕ ವ್ಯಾಯಾಮದಲ್ಲಿ ತುಂಬ ಮಮತೆ. ಇದಕ್ಕೆ ತಕ್ಕಂತೆ ಅನೇಕ ಜಟ್ಟಿಗಳು ಇವರ ಶಿಷ್ಯರಾಗಲು ಬಯಸುತ್ತಿದ್ದರು. ಶಿವರಾತ್ರಿಯ ಉತ್ಸ ವಕಾಲದಲ್ಲಿ ಕುಸ್ತಿಯ ಕಣಕ್ಕೆ ಇಳಿಯುತ್ತಿದ್ದ ಅನೇಕ ಜಟ್ಟಿಗಳು ಒಂದು ಒಳ್ಳೆಯ ‘ಮಟ್ಠಿ’ಯನ್ನೊಳಗೊಂಡ ವ್ಯಾಯಾಮಶಾಲೆ ಬೇಕೆಂದು ಬಯಸುತ್ತಿದ್ದರು. ಆದ್ದರಿಂದ 1949ರ ಹೊತ್ತಿಗೆ ಶ್ರೀ ರಾಘವೇಂದ್ರರು ಅತ್ಯಾಧುನಿಕವಾದ ಒಂದು ವ್ಯಾಯಾಮಶಾಲೆಯನ್ನು ಕಟ್ಟಿಸಿದರು. ಇಲ್ಲಿನ ಮಟ್ಠಿಯಲ್ಲಿ (ಕೆಮ್ಮಣ್ಣು) ಸುಮಾರು ಮೂರು ಸಹಸ್ರ ರೂಪಾಯಿಗಳ ಔಷಧ ಸಾಮಗ್ರಿಗಳನ್ನು ಸೇರಿಸಲಾಗಿದೆ. ನೂರಾರು ಕೊಡ ಆಕಳಹಾಲು, ಮೊಸರು, ಬೆಣ್ಣೆ, ಜೇನುತುಪ್ಪಗಳಿಂದ ಹದಗೊಳಿಸಿರುವ ಈ ಮಟ್ಠಿ ಚರ್ಮರೋಗಗಳಿಗೆ ರಾಮಬಾಣವಾಗಿರುವುದಲ್ಲದೇ ವಾಯುರೋಗ (ರುಮ್ಯಾಟಿಸಂ) ಹರವಾಗಿದೆ. ಅಸುಭಿಕ್ಷದ ಕಾಲದಲ್ಲಿ ಇದಕ್ಕಾಗಿ ವೆಚ್ಚಮಾಡಿದ ಹಣ ಹತ್ತು ಸಹಸ್ರ ರೂಪಾಯಿಗಳು; ಈಗ ಬಹುಶಃ ಒಂದು ಲಕ್ಷ ರೂಪಾಯಿಗಳಾದೀತು!
1950ರ ವೇಳೆಗೆ ಶ್ರೀ ರಾಘವೇಂದ್ರರು ತಮ್ಮ ಸಪ್ತವಾರ್ಷಿಕ ಯೋಜನೆಯ ಜೊತೆಯಲ್ಲಿ ತಾವು ಅಲ್ಲಿ ನಿಲ್ಲಬೇಕಾದ ಅವಧಿಯೂ ಮುಗಿದುದರಿಂದ ಯಾವುದೊಂದು ಮಮಕಾರವೂ ಇಲ್ಲದೆ ‘ಅನಾಥ ಸೇವಾಶ್ರಮ’ದಿಂದ ನಿರ್ಗಮಿಸಲು ಸಿದ್ದರಾದರು. ಆದರೆ ಈ ಕರೆಯುವ ಹಸುವನ್ನು ಕಳೆದುಕೊಳ್ಳಲು ಯಾರು ಒಪ್ಪಿಯಾರು? ಈಗ ಮುಲ್ಲಾಡಿಹಳ್ಳಿಯವರು ಮಾತ್ರವೇ ಅಲ್ಲ, ಬೇರೆ ಬೇರೆ ಊರಿನವರೂ ಅದನ್ನು ಪ್ರತಿಭಟಿಸಿದರು. ಅವರ ಪ್ರಾರ್ಥನೆ ಕಣ್ಣೀರುಗಳು ‘ವಜ್ರಾದಪಿ ಕಠೋರಾಣಿ ‘ಆದ ರಾಘವೇಂದ್ರರ ನಿಶ್ಚಯವನ್ನು ‘ಮೃದೂನಿ ಕುಸುಮಾದವಿ’ಯಾಗಿ ಮಾಡಿದವು. ಇಲ್ಲಿಂದ ಮುಂದೆ ‘ಶ್ರೀ ರಾಘವೇಂದ್ರ ಸ್ವಾಮೀಜಿ’ ಆದ ಅವರು ಇಲ್ಲಿಯೇ ನೆಲೆಸಿ ಅನಾಥ ಸೇವಾಶ್ರಮವನ್ನು ಸರ್ವತೋಮುಖವಾಗಿ ಬೆಳೆಸಿರುವುದು ಪ್ರತ್ಯಕ್ಷ ಪ್ರಮಾಣವಾಗಿ ಗೋಚರಿಸುತ್ತಿದೆ. ಆಶ್ರಮದ ಆವರಣಕ್ಕೆ ಬಂದಾಗ ಎಲ್ಲೆಲ್ಲೂ ಕಟ್ಟಡಗಳೇ. ಪರಪ್ಪಸ್ವಾಮಿಯ ಮಠ (1944), ಆಸ್ಪತ್ರೆ (1945), ಧರ್ಮಶಾಲೆ (1946), ಋಗ್ಣಾಲಯ (1947), ವಾಚನಾಲಯ (1948), ವ್ಯಾಯಾಮಶಾಲೆ (1949), ಪ್ರೌಢಶಾಲೆ, ಮುದ್ರಣಶಾಲೆ, ಆಶ್ರಮದ ಕಾರ್ಯಸೌಧ(1950-1951), ಉಪಾಧ್ಯಾಯರ ವಸತಿಗೃಹಗಳ(1952-1953), ಪರಸ್ಪರ ಸಹಾಯ ಸಂಘ, ಅಂಚೆಯ ಕಛೇರಿ (1953), ಅಣ್ಣ ಪೂರ್ಣ ಮಂದಿರ(1954), ವಿದ್ಯಾರ್ಥಿ ವಸತಿಗೃಹ (1958), ವಿವಿದೋದ್ದೇಶ ಪ್ರೌಢಶಾಲೆ (1959-1960), ಶಿಶುವಿಹಾರ, ಗೋಶಾಲೆ (1960), ವ್ಯಾಸಪೀಠ (1961), ಅಡಿಗೆಯ ಮನೆ (1962), ತಪೋವನ ಮತ್ತು ಅದರಲ್ಲಿನ ಧ್ಯಾನಮಂದಿರಗಳು (1963), ಅಥಿತಿ ಮಂದಿರ (1964), ದೈಹಿಕ ಶಿಕ್ಷಣ ಕಾಲೇಜ್ (1968), ಜೂನಿಯರ್ ಕಾಲೇಜ್ (1972), ಬನಶಂಕರಿ ದೇವಸ್ಥಾನ (1973), ಹೊಸ ಅಥಿತಿಮಂದಿರಗಳು (1975-76), ಉಪಾಧ್ಯಾಯರ ಶಿಕ್ಷಣ ಸಂಸ್ಥೆ ಮತ್ತು ದೈಹಿಕ ಶಿಕ್ಷಣ ಕಾಲೇಜ್ (1977), ಯೋಗಶಿಕ್ಷಣ ಕೇಂದ್ರ, ಪಾಕಶಾಲೆ (1978). ಈ ಎಲ್ಲ ಕಟ್ಟಡಗಳೂ ನೀರು ಬೆಳಕಿನ ಸೌಲಭ್ಯವನ್ನು ಹೊಂದಿದೆ. ಇಷ್ಟೇ ಅಲ್ಲ; ದುಮ್ಮಿ (1968), ದೇವರಹಳ್ಳಿ (1969), ಸೆಟ್ಟಿಹಳ್ಳಿ (1971)ಗಳಲ್ಲಿ ಪ್ರೌಢಶಾಲೆಗಳೂ ಉಪಾಧ್ಯಾಯರ ವಸತಿಗೃಹಗಳೂ ಎದ್ದು ನಿಂತಿವೆ. ದೂರದೃಷ್ಟಿಯುಳ್ಳ ಶ್ರೀ ಸ್ವಾಮೀಜಿಯವರು ಆಶ್ರಮವು ಸರೋದ್ಧಾರವಾಗಿ ನಡೆದುಕೊಂಡು ಹೋಗುವಂತೆ ಸಾಕಷ್ಟು ಜಮೀನನ್ನು ಆಶ್ರಮಕ್ಕಾಗಿ ಕೊಂಡಿರುವುದಲ್ಲದೆ ಸಹಸ್ರ ತೆಂಗಿನ ಮರಗಳ ತೋಟವೊಂದನ್ನು ಬೆಳೆಸಿ, ಅದರ ಮಧ್ಯದಲ್ಲಿ ತಮ್ಮ ಗುರುಗಳಾದ ಪಳನೀ ಸ್ವಾಮಿಯವರ ವೃಂದಾವನವನ್ನೂ, ತೋಟದ ಆರೈಕೆಗಾಗಿ ಅಗತ್ಯವಾದ ಸಿಬ್ಬಂದಿಗೆ ಮನೆಗಳನ್ನೂ ನಿರ್ಮಿಸಿದ್ದಾರೆ. ಸುಮಾರು ಒಂದು ಕೋಟಿ ರೂಪಾಯಿಗಳ ಆಶ್ರಮದ ಆಸ್ತಿ ಈಗ ಬೆಳೆದುನಿಂತಿದೆ.
ಶ್ರೀ ರಾಘವೇಂದ್ರ ಸ್ವಾಮೀಜಿ ಇಹವನ್ನು ದೂರುವುದಿಲ್ಲ, ಪರವನ್ನು ದೂರಮಾಡಿಕೊಳ್ಳುವುದಿಲ್ಲ; ಇಹಪರಗಳ ಸಮನ್ವಯ ತತ್ವ ಅವರದು. ಪರಮಾರ್ಥವನ್ನು ಜೀವನಪರಿಷ್ಕರಣದಲ್ಲಿ ಕಂಡುಕೊಂಡಿದ್ದಾರೆ, ಈ ಮಹಾಯೋಗಿ. ಅನಾಥ ಸೇವಾಶ್ರಮದಲ್ಲಿ ನಡೆಯುವ ಮುಖ್ಯ ಕಾರ್ಯಗಳೆಂದರೆ ವೈದ್ಯ, ಶಿಕ್ಷಣ, ಯೋಗಾಭ್ಯಾಸ; ಈ ಮೂರರಲ್ಲಿಯೂ ಅವರ ಆ ಸಮನ್ವಯ ಸತ್ವವನ್ನು ಕಾಣಬಹುದು. ಮಾನವನಿಗೆ ಮೊತ್ತಮೊದಲ ಅವಶ್ಯಕ್ತೆಯೆಂದರೆ ದೇಹಾರೋಗ್ಯ . ‘ಶರೀರ ಮಾದ್ಯಂ ಖುಲುಧರ್ಮ ಸಾಧನಂ?’ ಶರೀರ ಆರೋಗ್ಯವಾಗಿದ್ದರೆ ತಾನೆ ಮನಸ್ಸು, ಬುದ್ಧಿ, ಚೇತನಗಳ ವಿಚಾರ? ಇದನ್ನು ಅರ್ಥಮಾಡಿಕೊಂಡೇ ಅಲ್ಲವೇ ಶ್ರೀ ಸ್ವಾಮೀಜಿ ವೈದ್ಯಶಾಲೆಯನ್ನು ಮೊಟ್ಟಮೊದಲು ಇಲ್ಲಿ ಸ್ಥಾಪಿಸಿದರು. ಇದರ ವಿಚಾರವನ್ನು ಹಿಂದೆಯೇ ಪ್ರಸ್ತಾಪಿಸಿದೆ. ಶ್ರೀಯವರು ತಾವೇ ಸ್ವತಃ ರೋಗಿಗಳನ್ನು ಪರೀಕ್ಷಿಸಿ, ತಮ್ಮ ನಿರ್ದೇಶನದಲ್ಲಿಯೇ ತಯಾರಾದ ಅರಿಷ್ಟ, ಆಸವ, ಕಷಾಯ, ಭಸ್ಮಾದಿಗಳನ್ನು ಬಂದ ರೋಗಿಗಳಿಗೆ ಉಚಿತವಾಗಿ ಹಂಚುತ್ತಾರೆ. ರೋಗ ನಿವಾರಣೆಗಾಗಿ ಆಸನ ಪ್ರಾಣಾಯಾಮಾದಿ ಯೋಗ ವಿದ್ಯೆಯನ್ನು ಉಪದೇಶಿಸುತ್ತಾರೆ. ಅವರು ರೋಗಿಗಳಲ್ಲಿ ತೋರುವ ಪ್ರೀತಿ, ಆದರ, ಆತ್ಮೀಯತೆಯೊಡನೆ ಅವರ ಆಧ್ಯಾತ್ಮ ಶಕ್ತಿಯೂ ಸೇರಿ ಔಷಧದ ರೋಗನಿವಾರಣಾ ಶಕ್ತಿ ದ್ವಿಗುಣಗೊಳ್ಳುತ್ತದೆ. ಇದರಿಂದಲೇ ಪಾಶ್ಚಾತ್ಯ ವೈದ್ಯವಿದ್ಯೆಗೆ ಮಣಿಯದ ಗೂರಲು, ರಾಜಯಕ್ಷ್ಮ, ಮಧುಮೇಹ, ಕ್ಯಾನ್ಸರ್ ಮೊದಲಾದ ಭಯಂಕರ ರೋಗಗಳು ಇಲ್ಲಿ ಪಲಾಯನ ಮಂತ್ರವನ್ನು ಪಠಿಸಬೇಕಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಅನಾಥ ಸೇವಾಶ್ರಮ ಸಾಧಿಸಿರುವ ಪ್ರಗತಿ ಅದ್ವಿತೀಯವಾದುದು. ಶಿಶುವಿಹಾರದಿಂದ ಹಿಡಿದು ಜೂನಿಯರ್ ಕಾಲೇಜಿನ ವರೆಗೆ ನಡುಯುವ ಇಲ್ಲಿನ ಶಿಕ್ಷಣ ವಿಧಾನ ಪೂರ್ವಕಾಲದ ನಮ್ಮ ಗುರುಕುಲವಾಸಗಳನ್ನು ನೆನಪಿಗೆ ತರುತ್ತದೆ. ಆಶ್ರಮದ ವಿದ್ಯಾರ್ಥಿ ನಿಲಯ ನೂರಾರು ಜನ ವಿದ್ಯಾರ್ಥಿಗಳಿಗೆ ಉಚಿತವಾದ ಅಶನ ವಸನಗಳನ್ನು ಒದಗಿಸುತ್ತದೆ. ಅದ್ಯಾಪಕ ವೃಂದದವರು ಆಶ್ರಮದ ಆವರಣದಲ್ಲಿಯೇ ಇರುವುದರಿಂದ ಗುರು-ಶಿಷ್ಯ ಬಾಂಧವ್ಯ ಸಾಕಷ್ಟು ನಿಕಟವಾಗಿರಲು ಸಾಧ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಂದ ನಾವು ನಿರೀಕ್ಷಿಸುವ ಶಿಸ್ತು, ಸಂಯಮ, ಸೌಶೀಲ್ಯಗಳು ಮೂಡಿ ಬೆಳೆಯಲು ಸಹಾಯಕವಾಗಿದೆ. ಬೆಳಗ್ಗೆ ಐದು ಗಂಟೆಗೆ ಪ್ರಾರಂಭವಾಗುವ ವಿದ್ಯಾರ್ಥಿಗಳ ಸಂಯಮ, ಚಟುವಟಿಕೆ ರಾತ್ರಿ ಹತ್ತು ಘಂಟೆಯವರೆಗೆ ಕ್ರಮಬದ್ಧವಾಗಿ ನಡೆಯುತ್ತದೆ. ಬೆಳಗ್ಗಿನ ಐದು ಗಂಟೆಗೆ ಸರಿಯಾಗಿ ಸಮವಸ್ತ್ರವನು ಧರಿಸಿದ ಬಾಲಕ ಬಾಲಕಿಯರು ಸಾಮೂಹಿಕ ಪ್ರಾರ್ಥನೆಯನ್ನು ಮಾಡಿ, ಸೂರ್ಯನಮಸ್ಕಾರವನ್ನೂ ಹಲವು ಆಸನಗಳನ್ನೂ ಆಚರಿಸುತ್ತಾರೆ. ಇದು ನಿಜವಾಗಿಯೂ ಕಣ್ಣಿಗೊಂದು ಹಬ್ಬ. ದೈಹಿಕ ಶಿಕ್ಷಣದೊಡನೆ ಆಧ್ಯಾತ್ಮ ಸಾಧನೆಯೂ ಇದರಲ್ಲಿ ಸಮನ್ವಯಗೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರಾಚ್ಯ ಮತ್ತು ಪಾಶ್ಚಾತ್ಯ ಅಂಗಸಾಧನೆಗಳಲ್ಲಿ ಪ್ರವೀಣರಾಗುತ್ತಾರೆ. ಸ್ವಾಮಿ ಶ್ರೀ ವಿವೇಕಾನಂದರು ಹೇಳುವಂತೆ ‘ಕಬ್ಬಿಣದಂತಹ ಮಾಂಸಖಂಡ, ಉಕ್ಕಿನಂತಹ ನರಮಂಡಲವುಳ್ಳ ಪುರುಷಸಿಂಹ’ರು ಇಲ್ಲಿ ತಯಾರಾಗುತ್ತಾರೆ. ದೇಹ, ಬುದ್ಧಿ, ಮನಸ್ಸುಗಳು ಏಕಕಾಲದಲ್ಲಿಯೇ ವಿಕಾಸಗೊಂಡು ಭಾರತದ ಭವ್ಯ ಭವಿಷ್ಯತ್ ಪ್ರಜೆಗಳನ್ನು ಸೃಷ್ಠಿಸುವ ಪವಿತ್ರಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಆಶ್ರಮದ ದೈನಂದಿನ ಕಾರ್ಯಗಳಲ್ಲಿ ಗುರು-ಶಿಷ್ಯರು ಸಮರಸವಾಗಿ ಬೆಳೆಯುತ್ತಾರೆ. ಇಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲ. ಭಜನೆ, ಪ್ರಾರ್ಥನೆ, ದೈಹಿಕ ಸಾಧನೆಗಳಂತೆ ಅಶನ, ವಸನ, ವಸತಿಗಳಲ್ಲಿ ಯಾವುದೊಂದು ತಾರತಮ್ಯವೂ ಇಲ್ಲಿ ಕಂಡುಬರುವುದಿಲ್ಲ. ‘ಹರಿಜನರಿಂದ’ ಬ್ರಾಹ್ಮಣನವರೆಗೆ ಇರುವ ಹಿಂದೂಗಳು ಮಾತ್ರವೇ? ಅಲ್ಲ; ಕ್ರೈಸ್ತ, ಮಹಮದೀಯರಿಗೂ ಇಲ್ಲಿ ಸಮಾನವಾದ ಅವಕಾಶ ದೊರೆಯುತ್ತದೆ.
ಆಧ್ಯಾತ್ಮದಲ್ಲಿ ತುಂಬಾ ಮುಂದುವರೆದಿರುವ ಶ್ರೀ ರಾಘವೇಂದ್ರ ಸ್ವಾಮೀಜಿ ಯೋಗವಿದ್ಯಾ ಪಾರಂಗತರು, ಮಹಾ ತಪಸ್ವಿಗಳು, ಸಿದ್ಧಪುರುಷರು. ವರ್ಷದಲ್ಲಿ ಒಂದು ತಿಂಗಳಕಾಲ-ಶ್ರಾವಣ ಮಾಸದಲ್ಲಿ-ಅವರು ಹೊರಜಗತ್ತಿನಿಂದ ವಿಮುಖರಾಗಿ ಏಕಾಂತವಾಸಿಗಳಾಗುತ್ತಾರೆ; ಗಾಂಧೀ ಕುಟೀರದಲ್ಲಿ ಅವರು ನಿರ್ಮಿಸಿಕೊಂಡಿರುವ ನೆಲಮಾಳಿಗೆಯ ಪೂಜಾಗೃಹವೇ ಅವರ ವಾಸಸ್ಥಾನ. ಅಲ್ಪಾಹಾರವನ್ನು ಸೇವಿಸುತ್ತಾ ಅಲ್ಲಿಯೇ ಆತ್ಮರಾಮ ಪರಾಯಣರಾಗಿರುತ್ತಾರೆ. ಆಗ ಅಲ್ಲಿ ತುಂಬಿಕೊಂಡುಬಂದ ಅಧ್ಯಾತ್ಮ ಶಕ್ತಿಯನ್ನು ಉಳಿದ ಹನ್ನೊಂದು ತಿಂಗಳು ಲೋಕಕಲ್ಯಾಣಕ್ಕಾಗಿ ಬಳಸುತ್ತಾರೆ. ಜ್ಞಾನದಾಹದಿಂದ ಆಶ್ರಮಕ್ಕೆ ಬರುವವರಿಗೆಲ್ಲ ನಿರ್ವಂಚನೆಯಾಗಿ ಅದನ್ನು ದಾನ ಮಾಡುತ್ತಾರೆ. ಅವರ ಆಶ್ರಮವೆಂಬುದು ಒಂದು ಯೋಗಶಿಕ್ಷಣ ಕೇಂದ್ರ. ಅದನ್ನು ಬಯಸಿ ಬಂದವರೆಲ್ಲ ತೃಪ್ತಿಯಿಂದ ಹಿಂದಿರುಗುತ್ತಾರೆ. ಪ್ರತಿವರ್ಷವೂ ನವರಾತ್ರಿಯ ಕಾಲದಲ್ಲಿ ಯೋಗಶಿಕ್ಷಣ ಶಿಬಿರವೊಂದನ್ನು ಏರ್ಪಡಿಸಿ, ಇಪ್ಪತ್ತೊಂದು ದಿನಗಳ ಕಾಲ ಉಚಿತವಾದ ಊಟ ವಸತಿಗಳೊಡನೆ ನಾಡಿನ ತರುಣ ತರುಣಿಯರಿಗೆ ಯೋಗ ಶಿಕ್ಷಣವನ್ನು ನೀಡುತ್ತಾರೆ. ವರ್ಷಕ್ಕೆ ಎರಡು ಭಾರಿ-ಶಿವರಾತ್ರಿ ಮತ್ತು ಗಣೇಶನ ಹಬ್ಬಗಳಲ್ಲಿ-ಸಪ್ತಾಹಗಳನ್ನು ಏರ್ಪಡಿಸಿ ಯಥೇಚ್ಚವಾಗಿ ಅನ್ನದಾನ ಮಾಡುವುದರಾ ಜೊತೆಗೆ ಉದ್ದಾಮ ಸಾಹಿತಿಗಳ ಮತ್ತು ಸಾಧುಸಂತರ ಭಾಷಣ ಪ್ರವಚನಗಳ ಮೂಲಕ ಜ್ಞಾನದಾಸೋಹವನ್ನೂ ನಡೆಸುತ್ತಾರೆ. ಆ ಕಾಲದಲ್ಲಿ ನಾಡಿನ ಶ್ರೇಷ್ಠ ಸಾಹಿತಿಗಳನ್ನು ಲೋಕೋಪಕಾರಿಗಳಾದ ಉದಾರಿಗಳನ್ನು ಸನ್ಮಾನಿಸುವುದೂ ಉಂಟು.
ಆಶ್ರಮವೇನು ಲೋಕೋ ವಿಶಾಲವಾಗಿ ಬೆಳೆದು ನಿಂತಿದೆ; ನೋಡುವವರ ಕಣ್ಣ ಹಬ್ಬವಾಗಿದೆ. ಇದಕ್ಕೆ ಭೇಟಿ ಇತ್ತ ದೇಶವಿದೇಶಗಳ ಮಹನೀಯರು ಇದನ್ನು ಮುಕ್ತಕಂಠರಾಗಿ ಹೊಗಳಿದ್ದಾರೆ. ಆದರೆ ಈ ನಂದನವನ ಸೃಷ್ಠಿಯ ಬೆನ್ನಹಿಂದೆ ಎಂತಹ ಭಯಂಕರವಾದ ಕಷ್ಟ ಕಾರ್ಪಣ್ಯಗಳು ಕಾಣಿಸಿಕೊಂಡು ಮರೆಯಾಗಿವೆ ಎಂಬುದು ಊಹಾತೀತ. ಇದನ್ನು ಕಟ್ಟಿದವರು ಹೊಟ್ಟೆಗೆ ಹಿಟ್ಟಿಲ್ಲದೆ ಹಿಡಿ ಮಂಡಕ್ಕಿಯಿಂದ ದಿನಗಳನ್ನು ನೂಕಿದುದೂ ಉಂಟು; ‘ಒಂದು ಬೊಗಸೆ ಕಾಳಿಗಾಗಿ, ಒಂದು ಕಾಸಿಗಾಗಿ ದಿನಗಟ್ಟಲೆ ಜೋಳಿಗೆ ಹಿಡಿದು ನಿಂತು ಪರದಾಡಿದ ದುರ್ದಿನಗಳುಂಟು.’ ಆಶ್ರಮವನ್ನು ಬೆಳೆಸುತ್ತಾ ಹೋದಂತೆ ಲೆಕ್ಕವಿಲ್ಲದಷ್ಟು ತೊಡಕುಗಳು, ಕಟು ಟೀಕೆಗಳು, ವಿಘ್ನಗಳು, ಕೊನೆಗೆ ‘ಈ ವ್ಯಕ್ತಿಯನ್ನೇ ನಿರ್ನಾಮ ಮಾಡ’ಬೇಕೆಂಬ ಅಕಾರಣದ್ವೇಷ ಕೂಡಾ ಎದುರಾದುದುಂಟು. ಹೀಗಾಗಿ, ಮನಸ್ಸಿನ ನೆಮ್ಮದಿ, ಶಾಂತಿ, ಗೌರವಗಳು ಹಾದುದುಂಟು. ಆದರೆ ಸಾಮಾನ್ಯರಂತೆ ಅದನ್ನೇ ಹಚ್ಚಿಕೊಂಡು ಕೊರಗಿದುದಿಲ್ಲ. ‘ಅವುಗಳ ಸ್ಮರಣೆಯೂ ಒಂದು ಸ್ಫೂರ್ತಿ’ ಎನ್ನುತ್ತಾರೆ, ಶ್ರೀ ರಾಘವೇಂದ್ರ ಸ್ವಾಮೀಜಿ. ತ್ಯಾಗ ಸೇವೆಗಳ ಈ ತ್ರಿವಿಕ್ರಮಮೂರ್ತಿಗೆ, ಹಗಲಿರಿಳು ನಿಸ್ವಾರ್ಥದಿಂದ ದುಡಿಯುವ ಈ ಕರ್ಮಯೋಗಿಗೆ ‘ಅನ್ಯಮಿಂದ್ರಂ ಕರಿಷ್ಯಾಮಿ’ ಎನ್ನುವಂತಹ ಆತ್ಮಪ್ರತ್ಯವಿದೆ. ‘ಅಭೀಃ’ ಎಂಬ ವೇದೋಕ್ತಿಯನ್ನು ಮೂಲಮಂತ್ರವನ್ನಾಗಿ ಮಾಡಿಕೊಂಡು ಅದಮ್ಯವಾದ ಸೇವಾಭಿಲಾಷೆಯಿಂದ ಕಾರ್ಯರಂಗಕ್ಕಿಳಿದಿರುವ ಈ ಕರ್ಮಯೋಗಿಗೆ ‘ಅಸಾಧ್ಯ’ ಎಂಬುದು ಎಂದೂ ಎದುರಾಗಿಲ್ಲ. ‘ಕ್ರಿಯಾಸಿದ್ಧಿಃ ಸತ್ವೇ ಭವತಿ; ನ ಉಪಕರಣೆ’ ಎಂಬ ಸೂಕ್ತಿಗೆ ಶ್ರೀ ರಾಘವೇಂದ್ರಸ್ವಾಮೀಜಿ ಒಂದು ಜ್ವಲಂತ ಉದಾಹರಣೆ. ಅವಿರಳವಾಗಿ, ಅವಿಶ್ರಾಂತವಾಗಿ, ನಿಷ್ಕಾಮಬುದ್ಧಿಯಿಂದ ದುಡಿದರೆ ಸಿದ್ಧಿ ತನಗೆತಾನೇ ಬರುತ್ತದೆ ಎಂಬುದು ಅವರ ಸಿದ್ಧಾಂತ. ‘ನಿಷ್ಕಾಮಕರ್ಮ’ ಎಂಬುದಕ್ಕೆ ಇನ್ನೊಂದು ಹೆಸರೇ ‘ಶ್ರೀ ರಾಘವೇಂದ್ರ’.
Previous… |
Next… |